ಬೆಂಗಳೂರು, ಡಿ. 21: ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುವೆಂಪು ನಗರ ವಾರ್ಡ್ ನಂಬರ್-11 ರಲ್ಲಿ 2.00 ಕೋಟಿ ಎಸ್.ಎಫ್.ಸಿ ಅನುದಾನದ ಅಡಿಯಲ್ಲಿ ರಸ್ತೆಗಳ ಡಾಂಬರೀಕರಣ ಮತ್ತು ಚರಂಡಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಕ್ಷೇತ್ರದ ಜನಪ್ರಿಯ ಶಾಸಕರಾದಂತಹ ಕೃಷ್ಣ ಬೈರೇಗೌಡ ರವರು, ಕ್ಷೇತ್ರದ ಕಾರ್ಪೊರೇಟರ್ ಪಾರ್ಥಿಬ ರಾಜನ್, ಕ್ಷೇತ್ರದ ನಿವಾಸಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಡನೆ ನೆರವೇರಿಸಿದರು.
ಇದಲ್ಲದೆ ಕಾರ್ಪೊರೇಟರ್ ಪಾರ್ಥಿಬ ರಾಜನ್ ಮಾತನಾಡಿ, ರಾಜ್ಯ ಸರ್ಕಾರ ಕ್ಷೇತ್ರಕ್ಕೆ ಅನುದಾನ ಕೊಡುವ ನಿಟ್ಟಿನಲ್ಲಿ ತಾರತಮ್ಯ ಮಾಡುತ್ತಿದೆ. ಇಂತಹ ತಾರತಮ್ಯದಿಂದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ. ಆದಷ್ಟು ಬೇಗ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಾದಂತಹ ಯಡಿಯೂರಪ್ಪನವರು ಮಲತಾಯಿ ಧೋರಣೆಯನ್ನು ತೋರದೆ ಎಲ್ಲಾ ಕ್ಷೇತ್ರಕ್ಕೂ ಸರಿಯಾದಂತಹ ಅನುದಾನವನ್ನು ನೀಡಿ ಇಡೀ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.