ಜೈಪುರ, ಡಿ.16: ಮಾಜಿ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಕುಟುಂಬದ ಬಗ್ಗೆ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿದ್ದ ಬಾಲಿವುಡ್ ನಟಿ ಪಾಯಲ್ ರೋಹ್ಟಗಿರನ್ನು 8 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೋತಿಲಾಲ್ ನೆಹರೂ ಅವರ ಬಗ್ಗೆ ಬಾಲಿವುಡ್ ನಟಿ ಪಾಯಲ್ ರೋಹ್ಟಗಿ ವಿಡಿಯೋವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಚಾರ್ಮೇಶ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು.
ಕಳೆದ ಡಿ.15ರಂದು ಬುಂದಿಯ ಸದರ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬುಂದಿ ಎಸ್ಪಿ ಮಮತಾ ಗುಪ್ತಾ ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ನಟಿ ಪಾಯಲ್ ರೋಹ್ಟಗಿ ಅವರನ್ನು ಅಹಮದಾಬಾದ್ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ನಂತರದಲ್ಲಿ ಬಂಧಿತ ನಟಿಯನ್ನು ಐಪಿಸಿ ಸೆಕ್ಷನ್ 66, 67 ಅಡಿ ವಿಚಾರಣೆಗೊಳಪಡಿಸಲಾಗಿತ್ತು.
ಇಂದು ಬಂಧಿತ ನಟಿ ಪಾಯಲ್ ರೋಹ್ಟಗಿ ಅವರನ್ನು ಬುಂದಿಯಲ್ಲಿರುವ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.