ಗದಗ, ನ. 30: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಈರುಳ್ಳಿಯ ಬೆಲೆ ಗಗನಕ್ಕೇರಿದ್ದು, ಹಗಲು ರಾತ್ರಿಯನ್ನದೆ ರೈತರ ಜಮೀನಿನಲ್ಲಿರುವ ಈರುಳ್ಳಿಗಳು ಕಳ್ಳತನವಾಗುತ್ತಿದೆ. ಹೌದು, ಈರುಳ್ಳಿಗೆ ಬಂಪರ್ ಬೆಲೆ ಬಂದ ಕೂಡಲೇ ಈರುಳ್ಳಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೀಗಾಗಿ ತಾವು ಬೆಳೆದ ಈರುಳ್ಳಿಯನ್ನು ಉಳಿಸಿಕೊಳ್ಳೋಕೆ ರೈತರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಹೌದು ಇಡೀ ರಾಜ್ಯಕ್ಕೆ ಈರುಳ್ಳಿ ಸರಬರಾಜು ಮಾಡೋ ಗದಗ ಜಿಲ್ಲೆಯಲ್ಲಿ ಈರುಳ್ಳಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಅದ್ರಲ್ಲೂ ತೀರ ಇತ್ತೀಚೆಗೆ ನರೇಗಲ್ ಗ್ರಾಮದ ಗುರುಬಸಯ್ಯ ಎಂಬ ರೈತ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಂದಾಜು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಈರುಳ್ಳಿಯನ್ನು ರಾತ್ರೋರಾತ್ರಿ ಕಳ್ಳರು ಕಟಾವು ಮಾಡಿಕೊಂಡು ಹೋಗಿದ್ದಾರೆ.
ಜಿಲ್ಲೆಯ ಇತರೆಡೆಯೂ ಸಹ ಈರುಳ್ಳಿ ಕಳ್ಳತನದ ಪ್ರಕರಣಗಳು ನಡೆದಿದ್ದರಿಂದ, ಎಚ್ಚೆತ್ತುಕೊಂಡಿರೋ ಜಿಲ್ಲೆಯ ಹಲವು ಗ್ರಾಮಗಳ ರೈತರು ತಮ್ಮ ಜಮೀನುಗಳಲ್ಲಿ ರಾತ್ರಿಯೆಲ್ಲಾ ಸರದಿಯಂತೆ ಕಾವಲು ಕಾಯ್ತಿದ್ದಾರೆ. ಲಕ್ಕುಂಡಿ ಗ್ರಾಮದ ಹಲವು ಜಮೀನುಗಳಲ್ಲಿ ಈರುಳ್ಳಿ ಬೆಳೆದ ಬೆಳೆಗಾರರು ಬ್ಯಾಟರಿ, ದೊಣ್ಣೆ ಹಿಡಿದು, ಸಾಕು ನಾಯಿಗಳೊಂದಿಗೆ ತಮ್ಮ ಜಮೀನಿನಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾರೆ.