ಸಿಂದಗಿ, ನ. 28 : ಯಂಕಂಚಿ ಬೈಪಾಸ್ ಬಳಿ ಚಾಲಕನ ನಿರ್ಲಕ್ಷ್ಯದಿಂದ ಸಾರಿಗೆ ಬಸ್ ಎಥೆನಾಲ್ ಇಂಧನದ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಐವರು ಗಂಭೀರ ಗಾಯಗೊಂಡಿದ್ದು, ಬಸ್ನಲ್ಲಿದ್ದ 35ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.
ಪದವಿ ಪರೀಕ್ಷೆ ಬರೆಯಲು ಸಿಂದಗಿ ಪಟ್ಟಣಕ್ಕೆ ಆಗಮಿಸುತ್ತಿದ್ದ ಯಾದಗಿರಿ ಜಿಲ್ಲೆಯ ವಂದಗನೂರ ಗ್ರಾಮದ ಶ್ರೀದೇವಿ ಬಿರಾದಾರ(18) ಅವರ ಕೈ ತುಂಡಾಗಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ರಾವುತಪ್ಪ ನಾಯ್ಕೋಡಿ (21), ಇಬ್ರಾಹಿಂ ಶಾಬಾದಿ (20), ಸಾಸಾಬಾಳ ಗ್ರಾಮದ ಶರಣಗೌಡ ಇಂಡಿ (18), ಹುಣಶ್ಯಾಳ ಗ್ರಾಮದ ಚಂದ್ರಕಾಂತ ಕುಂಟೋಜಿ (21) ಹಾಗೂ ಬಸ್ ಚಾಲಕ ಜೇವರಗಿಯ ಸಿದ್ದಪ್ಪ ಪೂಜಾರಿ(40) ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪಟ್ಟಣದ ಯುವಕರು ಗಾಯಗೊಂಡ ವಿದ್ಯಾರ್ಥಿಗಳಿಗೆ ತುರ್ತು ಸೇವೆ ಒದಗಿಸಿ ಅಗ್ನಿಶಾಮಕ ವಾಹನದಲ್ಲಿಯೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಬಸ್ ಡಿಕ್ಕಿ ರಭಸಕ್ಕೆ ಟ್ಯಾಂಕರ್ ಸ್ಫೋಟಗೊಂಡಿದ್ದರೆ ಹೆಚ್ಚಿನ ಪ್ರಾಣಾಪಾಯ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆ ವಿದ್ಯಾರ್ಥಿಗಳ ಪ್ರಾಣ ಉಳಿಸಿದೆ. ಘಟನಾ ಸ್ಥಳಕ್ಕೆ ಸಿಪಿಐ ಸತೀಶಕುಮಾರ ಕಾಂಬಳೆ, ಠಾಣಾಧಿಕಾರಿ ಎಸ್.ಎಚ್. ಹೊಸಮನಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಅಪಘಾತಕ್ಕೀಡಾದ ಬಸ್ ತೆರವುಗೊಳಿಸಿದರು. ಎಥೆನಾಲ್ ಟ್ಯಾಂಕರ್ ಚಾಲಕ ಷಣ್ಮುಗಂ ಕಲ್ಯಾಣಸುಂದರ ನೀಡಿದ ದೂರಿನನ್ವಯ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ