ಬೆಂಗಳೂರು,ನ. 22 : ಭಾರತೀಯ ಋಷಿಮುನಿಗಳು ನೂರಾರು ವರ್ಷ ಆರೋಗ್ಯವಂತರಾಗಿ ಬಾಳುತ್ತಿದ್ದರು ಪ್ರಶ್ನೆಗೆ ಸಮರ್ಪಕ ಉತ್ತರ ಯಾವುದು ಗೊತ್ತಾ..? ಅವರು ಕಾಡಿನಲ್ಲಿ ಅಲೆದು ಹುಡುಕಿ ತಿನ್ನುತ್ತಿದ್ದ ಗೆಡ್ಡೆ ಮತ್ತು ಗೆಣಸುಗಳು!
ಗೆಡ್ಡೆ ಗೆಣಸು ಎಷ್ಟು ತಿನ್ನುತ್ತಾರೋ ಗೊತ್ತಿಲ್ಲ. ಆದರೆ, ಇಂಗ್ಲೆಂಡ್, ಅಮೆರಿಕ ಸೇರಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಗೆಡ್ಡೆ ಮತ್ತು ಗೆಣಸಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅದಕ್ಕಾಗಿ ಧಾರವಾಡದಲ್ಲಿ 52ಕ್ಕಿಂತಲೂ ಹೆಚ್ಚಿನ ತಳಿಯ ಆಹಾರ ಪದಾರ್ಥ ರೂಪದ ಗೆಡ್ಡೆ ಗೆಣಸುಗಳ ಸಂರಕ್ಷಣೆ ಮತ್ತು ಅವುಗಳಿಗೆ ಮೌಲ್ಯವರ್ಧನ ಮಾಡಿ ಬೆಳೆಯುವ ರೈತರಿಗೆ ಉತ್ತಮ ಬೆಲೆ ಕೊಡಿಸುವ ಪ್ರಯತ್ನ ಸದ್ದಿಲ್ಲದೇ ಸಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿವಿಗಳು, ಅಖೀಲ ಭಾರತ ಗೆಡ್ಡೆ -ಗೆಣಸು ಸಂಶೋಧನಾ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸಿಗುವ ನೂರಕ್ಕೂ ಹೆಚ್ಚು ತಳಿಯ ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸುತ್ತಿವೆ. ಜತೆಗೆ, ಹೊಸ ತಳಿಗಳ ಶೋಧನೆ ಮತ್ತು ಅವುಗಳಿಂದ ಬರುವ ಉಪ ಉತ್ಪನ್ನಗಳ ಸಿದ್ಧತೆಯಲ್ಲಿ ತೊಡಗಿವೆ.
ಈ ಸಂಬಂಧ ಕೆನಡಾ ಮೂಲದ ನರಿಶ್ ಇಂಕ್ ಎನ್ನುವ ಕಂಪನಿ, ಧಾರವಾಡ ಜಿಲ್ಲೆಯ ನೂರಕ್ಕೂ ಹೆಚ್ಚು ರೈತರಿಗೆ ತಾನೇ ಗೆಣಸು ಬೀಜ ಕೊಡಿಸಿ, ಅವರಿಂದ ನೇರವಾಗಿ ಗೆಣಸು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಈ ಸಂಬಂಧ ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಗೆಣಸಿನ ಉಪ ಉತ್ಪನ್ನಗಳ ತಯಾರಿಕೆಗೆ ದೊಡ್ಡ ಕಾರ್ಖಾನೆ ಸ್ಥಾಪಿಸುತ್ತಿದ್ದು, ವರ್ಷದಲ್ಲಿ ಇದು ಕಾರ್ಯಾರಂಭ ಮಾಡಲಿದೆ.
ರೈತರಿಗೆ ನೇರ ಹಣ: ಗೆಣಸು ಇಂದು ರೈತರ ಆರ್ಥಿಕ ಮಟ್ಟ ಸುಧಾರಿಸುವ ತಳಿಯಾಗಿ ರೂಪುಗೊಂಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಉತ್ತಮ ತಳಿಯ ಕೆಂಗುಲಾಬಿ ಮತ್ತು ಬಿಳಿ ಬಣ್ಣದ ಗೆಣಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಪ್ರತಿ ಕೆಜಿಗೆ 30 ರೂ.ಲಭಿಸುತ್ತಿದೆ. ಒಂದು ಹೆಕ್ಟೇರ್ಗೆ 20-30 ಟನ್ನಷ್ಟು ಬೆಳೆಯುವ ಶ್ರೀಭದ್ರಾ ತಳಿಯನ್ನು ಧಾರವಾಡದ ಗೆಡ್ಡೆ-ಗೆಣಸು ಸಂಶೋಧನಾ ಕೇಂದ್ರ ಉತ್ಪಾದಿಸಿ ರೈತರಿಗೆ ನೀಡಿದೆ.