ಮಂಡ್ಯ, ಅ. 10: ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿ ನಾಯಕರು ಬೆಂಬಲ ಸೂಚಿಸಿ, ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ತಿಳಿಸಲು ಬಂದಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಬಿಜೆಪಿಗೆ ಸೇರುವುದಾದರೆ ಅಧಿಕೃತವಾಗಿ ತಿಳಿಸುತ್ತೇನೆ. ಕದ್ದುಮುಚ್ಚಿ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದರು.
ಇದೇ ವೇಳೆ, ಕೆ.ಆರ್.ಪೇಟೆ ಉಪಚುನಾಣೆಯಲ್ಲಿ ಅನರ್ಹ ಶಾಸಕ ನಾರಾಯಣ್ಗೌಡಗೆ ಸುಮಲತಾ ಬೆಂಬಲ ನೀಡುತ್ತಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಈ ಬಗ್ಗೆ ಸಂಸದೆ ಸುಮಲತಾ ಇಂದು ಸ್ಪಷ್ಟನೆ ನೀಡಿದ್ದಾರೆ. ಕೆಲವರು ನನ್ನನ್ನು ನೀವು ಆ ಪಕ್ಷ ಸೇರ್ತಿರಾ, ಈ ಪಕ್ಷ ಸೇರ್ತಿರಾ? ಅವ್ರಿಗೆ ಬೆಂಬಲ ಕೊಡಲ್ವ? ಇವ್ರಿಗೆ ಕೊಡಲ್ವ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನನಗೆ ಯಾರೆಲ್ಲಾ ಬೆಂಬಲ ಕೊಟ್ಟಿದ್ದಾರೆ ಅವರೆಲ್ಲರ ಪರವಾಗಿ ನಾನಿರುತ್ತೇನೆ ಎಂದು ಹೇಳಿದ್ದಾರೆ.
ನಾನು ಯಾರನ್ನು ಮರೆಯಲ್ಲ, ನಾನು ಯಾರನ್ನು ಕೈ ಬಿಡಲ್ಲ. ನನ್ನ ಗೆಲುವಿಗೆ ಕಾರಣ ಮಂಡ್ಯದ ಜನ. ಆ ಮಂಡ್ಯ ಜನರ ಒಳಿತಿಗಾಗಿ ನಾನು ಏನೇನು ಕ್ರಮ ತೆಗೆದುಕೊಳ್ಳಬೇಕು, ಯಾವ ಹೆಜ್ಜೆ ಇಡಬೇಕು ಎಂಬುದನ್ನು ಮಾತ್ರ ನಾನು ಮಾಡೇ ಮಾಡುತ್ತೇನೆ ಎಂದರು.