ಮಂಗಳೂರು: ಸೆ. 22 : ರಾಜ್ಯದಲ್ಲಿ ಪ್ರವಾಹ ಬಂದು 50 ದಿನಗಳಾದವು. 35 ಸಾವಿರ ಕೋಟಿ ರು.ಗೂ ಅಧಿಕ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1500 ಕೋಟಿ ರು. ಶೇ.4.2ರಷ್ಟು ಮಾತ್ರ. ಜನರಿಗೆ ಪರಿಹಾರ ತಲುಪಿಲ್ಲ. ರಾಜ್ಯ ಸರ್ಕಾರ ಬದುಕಿದೆಯಾ ಸತ್ತಿದೆಯಾ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ 10 ತಿಂಗಳ ಕಾಲ 5 ಸಾವಿರ ರು. ಮನೆ ಬಾಡಿಗೆ, 10 ಸಾವಿರ ರು. ಪರಿಹಾರ, ಮನೆ ಕಟ್ಟಲು ಸಹಾಯಧನ ಮತ್ತಿತರ ಭರವಸೆಗಳನ್ನು ಸಿಎಂ ಯಡಿಯೂರಪ್ಪ ನೀಡಿದ್ದರು. ಆದರೆ 10 ಸಾವಿರ ರು. ಬಿಟ್ಟರೆ ಯಾವ ಭರವಸೆಯೂ ಈಡೇರಿಲ್ಲ ಎಂದು ಆರೋಪಿಸಿದರು.