ದೊಡ್ಡಬಳ್ಳಾಪುರ, ಆ. 29: ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ದಿಢೀರ್ ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ನಗರದ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಇಂದು ಬೆಳಿಗ್ಗೆ ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿದಿದ್ದರು. ಇನ್ನು ಕಾಲೇಜು ಬಳಿಯಿಂದ ನೂರಾರು ವಿದ್ಯಾರ್ಥಿನಿಯರು ರ್ಯಾಲಿ ಮೂಲಕ ತಾಲೂಕು ಕಚೇರಿ ತಲುಪಿದರು. ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು ಕಾಲೇಜು ಪ್ರಾರಂಭವಾಗಿ ಆರು ವರ್ಷ ಕಳೆದರೂ ಮೂಲಭೂತ ಸೌಲಭ್ಯಗಳು ಕಲ್ಪಿಸಿಲ್ಲ. ಶೌಚಾಲಯ ಸೇರಿದಂತೆ ಕುಡಿಯುವ ನೀರು ಸಹ ಇಲ್ಲ. ಇನ್ನು ಕಾಲೇಜು ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪ್ರಾಜೆಕ್ಟ್ ಕೂಠಡಿ, ಗ್ರಂಥಾಲಯ ಇಲ್ಲ. ಉಪನ್ಯಾಸಕರಿಗೆ ಕನಿಷ್ಠ ವಿಶ್ರಾಂತಿ ಪಡೆಯಲು ಸಹ ಸ್ಟಾಫ್ ರೂಂ ಇಲ್ಲ. ಸಮಸ್ಯೆಗಳನ್ನು ಪರಿಷ್ಕರಿಸುವಂತೆ ಎಷ್ಟು ಬಾರಿ ಕೇಳಿಕೊಂಡರೂ ಜನಪ್ರತಿನಿಧಿಗಳು, ಅಧಿಕಾರಿಗಳು ಆಶ್ವಾಸನೆ ನೀಡುತ್ತಿದ್ದಾರೆ ವಿನಃ ಈಡೇರಿಸುತ್ತಲ್ಲ. ಕೇಳಿ ಕೇಳಿ ಸಾಕಾಗಿದೆ ಅದಕ್ಕಾಗಿ ಇಂದು ಅನಿವಾರ್ಯವಾಗಿ ಬೀದಿಗಿಳಿದ್ದೀವಿ ಎಂದರು. ನಂತರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.