ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನ

ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನ

ದೇವನಹಳ್ಳಿ, ಆ. 29: ಆರೋಗ್ಯ, ನೈರ್ಮಲೀಕರಣ, ಜಲಸಂರಕ್ಷಣೆ, ಸ್ವಚ್ಛತೆ ಸೇರಿದಂತೆ ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತಿಳಿಯಬೇಕಾದ ಸಂಗತಿಗಳ ಬಗ್ಗೆ 2 ದಿನಗಳ ಕಾಲ ಜನ ಜಾಗೃತಿ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದು, ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಬಳಿ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ, ಒಳಾವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಡಿಯುವ ನೀರು, ನೈರ್ಮಲ್ಯ ಆರೋಗ್ಯ ಕಾರ್ಯಕ್ರಮಗಳ ಕುರಿತಂತೆ ಆಯೋಜಿಸಲಾಗಿದ್ದ ಜನ ಜಾಗೃತಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಪ್ರತಿಯೊಂದು ಕಾರ್ಯಕ್ರಮವು ಜನರಗೆ ತಲುಪಬೇಕು. ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಿಳಿಯಲು ಹಾಗೂ ಅನುಷ್ಠಾನಗಳ ಬಗ್ಗೆ ಮಾಹಿತಿ ಇರಬೇಕು. ಶಾಲಾ ಮಕ್ಕಳು ಈ ಜನಜಾಗೃತಿ ವಸ್ತು ಪ್ರದರ್ಶನದ ಮೂಲಕ ಅವರಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜ್ಞಾನಾರ್ಜನೆ ಹಾಗೂ ಪೋಷಕರಿಗೆ ತಿಳಿ ಹೇಳಲು ಅನುಕೂಲವಾಗುವುದು.

ಚಿತ್ರಗಳ ಮೂಲಕ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ನಾವು ಓದುವ ಸಂದರ್ಭದಲ್ಲಿ ಇಂತಹ ಚಿತ್ರ ಗಳನ್ನು ನೋಡಿರುವುದನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಸಂಪೂರ್ಣ ಲಸಿಕೆ-ಪರಿಪೂರ್ಣ ಆರೋಗ್ಯ, ಪೌಷ್ಟಿಕ ಆಹಾರ, ಪುನಶ್ಚೇತನ ಕೇಂದ್ರಗಳು, ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ, ರಕ್ತ ಹೀನತೆಯನ್ನು ತಡೆಗಟ್ಟುವಿಕೆ, ತುರ್ತು ಸಂದರ್ಭದಲ್ಲಿ ಜೀವ ರಕ್ಷಣೆಗೆ 108ಕ್ಕೆ ಉಚಿತ ಕರೆಮಾಡುವುದು, ಡೆಂಗ್ಯು, ಚಿಕನ್ ಗುನ್ಯ, ಕ್ಷಯ ರೋಗ, ಮಾನಸಿಕ ಕಾಯಿಲೆ ರೋಗಗಳ ಉಲ್ಬಣಕ್ಕೆ ಕಾರಣಗಳು ಮತ್ತು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ಆರೋಗ್ಯ ಇಲಾಖೆಯ ಸೇವೆಗಳು ಹಾಗೂ ನೀರಿನ ಸಂರಕ್ಷಣೆ, ಶೌಚಾಲಯದ ಬಳಕೆ, ಕಸ ವಿಂಗಡಣೆ ಮಹತ್ವ ಸೇರಿದಂತೆ ಸಾಕಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಉತ್ತಮ ಮಾಹಿತಿಗಳನ್ನು ಪ್ರದರ್ಶನದಲ್ಲಿ ಅಳವಡಿಸಲಾಗಿದೆ ಎಂದರು.

ಸಾರ್ವಜನಿಕರಿಗೆ, ವಿದ್ಯಾಥಿಗಳಿಗೆ ಆರೋಗ್ಯ, ನೈರ್ಮಲೀಕರಣ, ಸರ್ಕಾರದ ಕಾರ್ಯಕ್ರಮಗಳು ಪರಿಚಯವಾಗುವ ಮೂಲಕ ಯೋಜನೆಗಳನ್ನು ಬಳಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದ್ದು, ಇದಕ್ಕೆ ಬೇಕಾದ ಎಲ್ಲಾ ರೀತಿಯ ಮಾಹಿತಿಗಳನ್ನು ಜನ ಜಾಗೃತಿ ವಸ್ತು ಪ್ರದರ್ಶನದ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದ್ದು, ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಹಲವು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ಜನಜಾಗೃತಿ ವಸ್ತು ಪ್ರದರ್ಶನದಲ್ಲಿ ನೀರು ಉಳಿಸಿ ಹಸಿರು ಬೆಳೆಸಿ, ಸಮೃದ್ಧ ಕರ್ನಾಟಕದ ನಿರ್ಮಾಣಕ್ಕೆ ದೃಢ ಹೆಜ್ಜೆಗಳು, ಉಚಿತ ಆರೋಗ್ಯ ಸಹಾಯವಾಣಿ-108, ಮೀನುಗಾರರ ಸಾಲಮನ್ನಾ ಅಭಿವೃದ್ದಿಯೇ ಆಡಳಿತ ಮಂತ್ರ, ಶೌಚಾಲಯದ ಬಳಕೆ ಬಗ್ಗೆ ಅರಿವು, ಸ್ವಚ್ಛಾಲಯ-ಶೌಚಾಲಯ, ಕಾಂಗರೂ ಮಾದರಿ ಮಗುವಿನ ಆರೈಕೆ, ತಾಯಿಕಾರ್ಡ್, ಆಸ್ಪತೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಿ, ಜನನಿ-ಶಿಶು ಸುರಕ್ಷಾ ಕಾರ್ಯಕ್ರಮಗಳು ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮಗಳು, ನವಜಾತ ಶಿಶುಗಳ ಆರೈಕೆ, ಮಾನಸಿಕ ಆರೋಗ್ಯ, ರಾಷ್ಟ್ರೀಯ ಪ್ಲೋರೋಸಿಸ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ, ತುರ್ತು ವೈದ್ಯಕೀಯ ಸೇವೆ, ಜಲ ಸಂರಕ್ಷಣೆ ಸೇರಿದಂತೆ ಬಹಳಷ್ಟು ವಿಚಾರಗಳ ಬಗ್ಗೆ ಜಾಗೃತಿ ಮತ್ತು ಮಾಹಿತಿ ನೀಡುವ ಪ್ರದರ್ಶನ ಫಲಕಗಳನ್ನು ಪ್ರದರ್ಶಿಸಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಎಸ್.ಶಂಕರಪ್ಪ, ಸಹಾಯಕ ನಿರ್ದೇಶಕ ಮಹೇಶ್ ಎನ್.ಎಸ್. ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos