ಉಡುಪಿ, ಆ. 23 : ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಉಡಪಿಯಲ್ಲಿ ಸಂಭ್ರಮ. ಶ್ರೀ ಕೃಷ್ಣ ಮಠವನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗಿದೆ. ಮಠದ ಗರ್ಭಗುಡಿಯಂತೂ ನಂದನವನವಾಗಿದೆ. ಸಾವಿರಾರು ಭಕ್ತರು ಭಗವಾನ್ ಶ್ರೀಕೃಷ್ಣನ ದರ್ಶನದಲ್ಲಿ ತಲ್ಲೀನರಾಗಿದ್ದಾರೆ. ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ಮತ್ತು ಅದಮಾರು ಕಿರಿಯ ಶ್ರೀಗಳು ಕೃಷ್ಣನ ಮೂಲ ಮೂರ್ತಿಗೆ ಅಲಂಕಾರ ಮಾಡಿ, ಉತ್ಸವ ಮೂರ್ತಿಯನ್ನು ಚಿನ್ನದ ತೊಟ್ಟಿಲಿನಲ್ಲಿ ಇಟ್ಟು ಪೂಜಿಸಲಾಗಿದೆ.
ಯಶೋಧೆ ಶ್ರೀಕೃಷ್ಣನನ್ನು ತೊಟ್ಟಿಲಲ್ಲಿ ಕೂರಿಸಿ ತೂಗುವಂತೆ ಕಾಣುವ ವಿಭಿನ್ನ ಅಲಂಕಾರ ಭಕ್ತರ ಗಮನ ಸೆಳೆದಿದೆ. ಅಷ್ಟಮಿಯ ದಿನದ ಮಹಾಪೂಜೆಯನ್ನು ಪಲಿಮಾರು ಸ್ವಾಮೀಜಿ ಮಾಡಿದ್ದು, ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ನೆರವೇರಿಸಿದ್ದಾರೆ. ಮಧ್ಯರಾತ್ರಿ 12.12ಕ್ಕೆ ಭಗವಂತನ ಜನನವಾಗುವ ಸಂದರ್ಭ ದೇವರಿಗೆ ಹಾಲು ಮತ್ತು ನೀರು ಸಮರ್ಪಿಸಿ ಸ್ವಾಗತಿಸಲಾಗುತ್ತದೆ. ನಂತರ ಶ್ರೀ ಕೃಷ್ಣನ ಭಕ್ತರು ಅನ್ನಾಹಾರ ಸ್ವೀಕಾರ ಮಾಡುತ್ತಾರೆ.