ನವದೆಹಲಿ, ಆ.18 : ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಆ. 18 ಅತ್ಯಂತ ಮಹತ್ವದ ದಿನ.
11 ವರ್ಷಗಳ ಹಿಂದೆ ಅಂದ್ರೆ 18 ಆ. 2008ರಂದು ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಮೊದಲ ಬಾರಿ ನೀಲಿ ಜೆರ್ಸಿ ತೊಟ್ಟು ಅಂಗಳಕ್ಕಿಳಿದ ಕೊಹ್ಲಿ ಶ್ರೀಲಂಕಾ ವಿರುದ್ಧ ಬ್ಯಾಟ್ ಬೀಸಿದ್ದರು. ಹಾಗಾಗಿ ಕೊಹ್ಲಿ ಅವರ ವೃತ್ತಿ ಜೀವನದಲ್ಲಿ ಆ. 18 ಮಹತ್ವ ಪಡೆದುಕೊಳ್ಳುತ್ತದೆ. ಶ್ರೀಲಂಕಾ ಜೊತೆ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಪ್ರವಾಸ ಕೈಗೊಂಡಿತ್ತು. ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಅಂಗಳಕ್ಕಿಳಿದಿದ್ದ ದಿನಕ್ಕೆ 11 ವರ್ಷಗಳು ಪೂರ್ಣಗೊಂಡಿವೆ.
ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ಶ್ರೇಣಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಅಂದು ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದ್ರೆ ಮೊದಲ ಪಂದ್ಯದಲ್ಲಿ ಕೇವಲ 12 ರನ್ ಗಳಿಸುವ ಮೂಲಕ ನಿರಾಸೆಯನ್ನು ಮೂಡಿಸಿದ್ದರು. 33 ನಿಮಿಷದ ಆಟದಲ್ಲಿ 22 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸೇರಿದಂತೆ 12 ರನ್ ಕಲೆ ಹಾಕಿದ್ದರು. ಮೊದಲ ಪಂದ್ಯದಲ್ಲಿ ಕೊಹ್ಲಿ ಅವರ ವಿಕೆಟ್ ನುವಾನ್ ಕುಲಶೇಖರ್ ಪಡೆದಿದ್ದರು. ಭಾರತ 146 ರನ್ ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿದಿತ್ತು. ಶ್ರೀಲಂಕಾ 8 ವಿಕೆಟ್ ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.