ಉಡಪಿ, ಆ, 15: ಸೆಲ್ಫಿ ಹುಚ್ಚು ಎಲ್ಲರಲ್ಲಿಯೂ ಇರುವುದು ಸಾಮಾನ್ಯ. ಸಲ್ಪಿ ತೆಗೆದುಕೊಳ್ಳಲು ಯುವನೊಬ್ಬ ಆಯತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಕರ್ಕಾಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿಫಾಲ್ಸ್ ಬಳಿ ನಡೆದಿದೆ. ಸುದೇಶ್ ( 26) ನೀರು ಪಾಲಾದ ಯುವಕ. ವಾಸನಂದಳಿಕೆ ಗ್ರಾಮದ ಮಂಜರಪಲ್ಕೆ ಅಬ್ಬನಡ್ಕ ನಿವಾಸಿ ಕೃಷ್ಣಮೂಲ್ಯ ಅವರ ಪುತ್ರ ಸುದೇಶ್ ಗೆಳೆಯರಾದ ಬೋಳಪದವಿನ ರಾಕೇಶ್(24), ಹಾಳೆಕಟ್ಟೆ ಕೈರೋಲಿ ಹೌಸ್ ಭರತ್ ಪೂಜಾರಿ(31), ಕೊಡ್ಸರಬೆಟ್ಟು ಮೂಡುಮನೆಯ ಸಂತೋಷ್(24) ಎಂಬುವರ ಜತೆಯಲ್ಲಿ ಸುದೇಶ್ ಅರ್ಬಿಫಾಲ್ಸ್ಗೆ ಗುರುವಾರ ಮಧ್ಯಾಹ್ನ 2.30ರ ವೇಳೆಗೆ ತೆರಳಿದ್ದರು.
ಹರಿಯುವ ನೀರಿನಲ್ಲಿ ಬಂಡೆ ಕಲ್ಲಿನ ಮೇಲೆ ನಿಂತು ಇವರೆಲ್ಲರೂ ಸೆಲ್ಫಿ ತೆಗೆಯುತ್ತಿದ್ದರು. ಈ ಪೈಕಿ ಸುದೇಶ್ ಹಾಗೂ ಭರತ್ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಭರತ್ ಈಜಿಕೊಂಡು ದಡ ಸೇರಿದರೆ, ಸುದೇಶ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾನೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರೂ ಮಾಹಿತಿ ಲಭ್ಯವಾಗಿಲ್ಲ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.