ಬೆಂಗಳೂರು, ಆ, 14: 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ರಾಜ್ಯದ ರಾಜ್ಯಕೀಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಹೌದು, ಕಳೆದ ಒಂದು ತಿಂಗಳಿನಿಂದ ಅತೃಪ್ತ ಶಾಸಕರ ವಿಷಯ ಭಾರೀ ಚರ್ಚೆಯಲ್ಲಿದೆ. ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟ ಹಿನ್ನೆಲೆಯೇ ದೋಸ್ತಿ ಸರ್ಕಾರ ಪತನವಾಯಿತು. ಮತ್ತೆ ಈಗ ಜೆಡಿಎಸ್ ಪಕ್ಷದ ಮೂವರು ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಲು ಸಿದ್ಧವಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಕಾಂಗ್ರೆಸ್ ಪಕ್ಷದ 12 ಹಾಗೂ ಜೆಡಿಎಸ್ ಪಕ್ಷದ ಮೂವರು ಶಾಸಕರು ಅರ್ಹರಾಗಿದ್ದು, ಮುಂದಿನ ದಿನಗಳಲ್ಲಿ ಅವರು ಬಿಜೆಪಿ ಸೇರುವುದು ಪಕ್ಕ ಆಗಿದೆ. ಶಾಸಕರಾದ ಹೆಚ್. ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಅವರು ಜೆಡಿಎಸ್ ನಿಂದ ದೂರವಾಗುತ್ತಿದ್ದಂತೆ ಮತ್ತೊಬ್ಬ ಹಿರಿಯ ಶಾಸಕ ಪಕ್ಷ ತೊರೆಯಲು ಮುಂದಾಗಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾದ ಮಾಜಿ ಸಚಿವ ಜಿ.ಟಿ. ದೇವೇಗೌಡರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಮೈಸೂರು ಭಾಗದಲ್ಲಿ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ರಾಜಕೀಯ ನೆಲೆ ಕಲ್ಪಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ ಜಿ.ಟಿ. ದೇವೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಇದ್ದ ಸರ್ಕಾರವನ್ನು ಕಳೆದುಕೊಂಡ ದೋಸ್ತಿಗಳು ಇದೀಗ ಶಾಸಕರನ್ನು ಕಳೆದುಕೊಳ್ಳುತ್ತಿದ್ದಾರೆ