ಭೋಪಾಲ್, ಜು. 24: ಅಂಗನವಾಡಿ ಮಕ್ಕಳಿಗೆ ಶೌಚಾಲಯದಲ್ಲಿ ಅಡುಗೆ ತಯಾರಿಸಿದರೆ ತಪ್ಪೇನು ಎಂದು ಹೇಳುವ ಮೂಲಕ ಮಧ್ಯ ಪ್ರದೇಶದ ಸಚಿವರೊಬ್ಬರು ತಮ್ಮ ಧಿಮಾಕು ತೋರಿಸಿದ್ದಾರೆ. ಜಾಗದ ಅಭಾವದಿಂದಾಗಿ ಅಲ್ಲಿನ ಶಿಕ್ಷಕರು ಶೌಚಾಲಯದಲ್ಲೇ ಮಕ್ಕಳಿಗೆ ಅಡುಗೆ ತಯಾರಿಸುತ್ತಿದ್ದಾರೆ. ಈ ಕುರಿತಂತೆ ಮಧ್ಯ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದಾಗ, ಅಲ್ಲಿನ ಸಚಿವೆ ಇಮಾರ್ತಿ ದೇವಿ ಅವರು ಉಡಾಫೆ ಉತ್ತರ ನೀಡಿದ್ದಾರೆ. ‘ನೀವು ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಅಡುಗೆ ಮಾಡಲು ಅಲ್ಲಿ ಸೂಕ್ತ ಜಾಗವಿಲ್ಲ. ಹೀಗಾಗಿ ಶಿಕ್ಷಕರು ಶೌಚಾಲಯದ ಪಕ್ಕದಲ್ಲಿ ಅಡುಗೆ ಮಾಡಿಕೊಂಡಿದ್ದಾರೆ. ಅದರಲ್ಲಿ ತಪ್ಪೇನು. ಈಗ ನಮ್ಮ ಮನೆಗಳಲ್ಲಿಯೇ ಅಟ್ಯಾಚ್ ಬಾತ್ರೂಮ್ ಮತ್ತು ಲೆಟ್ರಿನ್ ಗಳಿರುವುದಿಲ್ಲವೇ. ಹಾಗೆಂದ ಮಾತ್ರಕ್ಕೆ ನೀವು ಮನೆಯಲ್ಲಿ ತಿನ್ನುವುದನ್ನು ಬಿಟ್ಟು ಬಿಡುತ್ತೀರೇನು ಎಂದು ಪ್ರಶ್ನೆ ಮಾಡಿದ್ದಾರೆ.