ರಾಜ್ಯದ ವಿವಿಧಡೆ ಭಾರೀ ಮಳೆ

ರಾಜ್ಯದ ವಿವಿಧಡೆ ಭಾರೀ ಮಳೆ

ಶಿವಮೊಗ್ಗ, ಜು. 2 : ರಾಜ್ಯದ ವಿವಿಧೆಡೆ ಸೋಮವಾರವೂ ಮಳೆ ಮುಂದುವರಿದಿದೆ. ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಗಾಜನೂರು ತುಂಗಾ ಜಲಾಶಯ ಭರ್ತಿ ಹಂತಕ್ಕೆ ಬಂದಿದೆ.
ಸೋಮವಾರ ಸಂಜೆ ತುಂಗಾ ಜಲಾಶಯದ ನಾಲ್ಕು ಗೇಟ್ಗಳನ್ನು ಅರ್ಧ ತೆಗೆದು 5 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಯಿತು. 3.25 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 3 ಟಿಎಂಸಿ ನೀರು ಬಂದಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ 5 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಯಿತು. ಶೃಂಗೇರಿ ತಾಲೂಕಿ ಕೆರೆ-ಕಟ್ಟೆ, ನಮ್ಮಾರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಲ್ಲದೇ ಕೆಲದಿನಗಳ ಹಿಂದೆ ಸೊರಗಿದ್ದ ತುಂಗಾ ನದಿ ಈಗ ಮಳೆ ಬೀಳುತ್ತಿರುವುದರಿಂದ ಮೈದುಂಬಿ ಹರಿಯುತ್ತಿದೆ.
ತೀರ್ಥಹಳ್ಳಿ, ಸಾಗರ, ಹೊಸನಗರ, ನಗರ, ಆಗುಂಬೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಅಫಜಲ್ಪುರ, ಸೇಡಂ, ಆಳಂದ, ಚಿತ್ತಾಪುರ, ಜೇವರ್ಗಿ ತಾಲೂಕಿನಲ್ಲಿ ಜಿಟಿಜಿಟಿ ಮಳೆಯಾಗಿದೆ. ಕಲಬುರಗಿ ನಗರದಲ್ಲಿ ಮಧ್ಯಾಹ್ನ ಸುರಿದ ಮಳೆಯಿಂದಾಗಿ ನಗರದಲ್ಲಿ ಅಸ್ತವ್ಯಸ್ತ ಉಂಟಾಯಿತು.

ಫ್ರೆಶ್ ನ್ಯೂಸ್

Latest Posts

Featured Videos