ಬೆಂಗಳೂರು, ಜೂನ್. 13: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸು ಮದ್ಯಪಾನ ಮುಕ್ತ ಭಾರತ. ಮದ್ಯಪಾನ ವಿರೋಧಿ ಚಳುವಳಿ ಮಾಡಿ ಜಾಗೃತಿ ಮೂಡಿಸಿದಂತಹ ಮಹಾನಾಯಕ. ಆದರೆ ಈಗ ರಾಜಧಾನಿ ಬೆಂಗಳೂರಿನಲ್ಲಿ ಗಾಂಧೀಜಿಯ ಬೃಹತ್ ಪ್ರತಿಮೆ ಮತ್ತು ಚರ್ಚ್ ಮುಂದೆಯೇ ಅತಿ ದೊಡ್ಡ ಬಾರ್ ಓಪನ್ ಆಗಲು ಸಿದ್ಧತೆ ನಡೆದಿದೆ. ಬೆಂಗಳೂರಿನ ಎಂಜಿ ರಸ್ತೆಯ ಜಂಕ್ಷನ್ ಬಳಿಯ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಬೃಹತ್ ಗಾಂಧೀಜಿಯವರ ಪ್ರತಿಮೆ ಇದ್ದು ಅದರ ಮುಂದೆಯೇ ಟಾನಿಕ್ ಹೆಸರಿನಲ್ಲಿ ಬೃಹತ್ ಬಾರ್ ಶಾಪ್ ಓಪನ್ ಆಗಲಿದೆ.
ಅಬಕಾರಿ ನಿಯಮದ ಪ್ರಕಾರ 100 ಮೀ. ಅಂತರದಲ್ಲಿ ಧಾರ್ಮಿಕ ಸ್ಥಳ, ಶಾಲೆಗಳು ಇದ್ದರೆ ಬಾರ್ ತೆರೆಯಲು ಅನುಮತಿ ಇಲ್ಲ. ಈ ನಿಯಮಗಳು ಇದ್ದರೂ ಬಾರ್ ತೆರೆಯಲು ಅನುಮತಿಯನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಎದ್ದಿದೆ. ಏಷ್ಯಾದ ದೊಡ್ಡ ಬಾರ್ ಎಂದು ಹೇಳಲಾಗ್ತಿದ್ದು ಈ ಬಾರಿನ ಸಮೀಪವೇ ಚರ್ಚ್ ಮತ್ತು ಪೊಲೀಸ್ ಸ್ಟೇಷನ್ ಇದ್ದರೂ ಕೂಡ ಅನುಮತಿ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.