ಬೆಂಗಳೂರು, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಗಳಿಸಿ ಲೋಕಸಮರದಲ್ಲಿ ವಿಜಯಶಾಲಿಯಾಗಿ ಹೊರ ಹೊಮ್ಮಿದೆ. ಫಲಿತಾಂಶದ ನಂತರ ಸರ್ಕಾರ ಪತನವಾಗುತ್ತದೆ ಎಂಬ ಮಾತುಗಳು ಕೂಡ ಜೋರಾಗಿಯೇ ಸದ್ದು ಮಾಡುತ್ತಿದೆ. ಲೋಕಸಭಾ ಚುನಾಚಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ರಾಜ್ಯ ರಾಜಕಾರಣದ ಡಿ.ಕೆ ಶಿವಕುಮಾರ್, ಫಲಿತಾಂಶದ ನಂತರ ಸರ್ಕಾರದ ಉಳಿವಿಗೆ ಸರ್ಕಸ್ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ.
ಕೆಲದಿನಗಳ ಹಿಂದಷ್ಟೆ ಡಿ.ಕೆ ಶಿವಕುಮಾರ್ ಅವರು ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ, ಕಣ್ಣು ಮುಚ್ಚಿಕೊಂಡಿದ್ದೇನೆ ಮತ್ತು ಕಿವಿಗೆ ಕಾಟನ್ ಹಾಕಿಕೊಂಡಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಇದಕ್ಕೆ ಬೇರೆಯದೆ ಕಾರಣ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಕುಂದಗೋಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಯಿಂದ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಡಿ.ಕೆ ಶಿವಕುಮಾರ್ ಕುಂದಗೋಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೋಟೆಲ್ ನಲ್ಲಿ ತಂಗಿದ್ದರು. ಆಗ ದೈವ ಮಾನವರೊಬ್ಬರ ಬಳಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಕೇಳಿಸಿದ್ದರು. ಅವರು ಡಿಸೆಂಬರ್ ನಂತರ ನಿಮಗೆ ರಾಜಯೋಗವಿದೆ. ಅಲ್ಲಿಯವರೆಗೂ ಸೈಲೆಂಟಾಗಿ ಇರಿ ಎಂದಿದ್ದರಂತೆ. ಹಾಗಾಗಿ ಡಿಕೆಶಿ ಸುಮ್ಮನೆ ಇದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.