ಸೂರತ್, ಮೇ. 31, ನ್ಯೂಸ್ ಎಕ್ಸ್ ಪ್ರೆಸ್: 12 ವರ್ಷದ ಬಾಲಕಿಯೊಬ್ಬಳು ಜೈನ ಸನ್ಯಾಸಿನಿಯಾಗಿ ದೀಕ್ಷೆ ಪಡೆಯಲು ಮುಂದಾಗಿದ್ದಾಳೆ. ಸೂರತ್ನ ಖುಷಿ ಶಾ, ಜೈನ ಸನ್ಯಾಸಿನಿ ಆಗಲು ನಿರ್ಧರಿಸಿದ್ದಾಳೆ. ಖುಷಿ ಕುಟುಂಬದಲ್ಲಿ ಜೈನ ಸನ್ಯಾಸತ್ವ ಸ್ವೀಕರಿಸುತ್ತಿರುವುದು ಇವರೇ ಮೊದಲೇನಲ್ಲ. ಬಾಲಕಿ ಮಾತನಾಡಿ, ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬದ ನಾಲ್ವರು ಸನ್ಯಾಸತ್ವದ ಹಾದಿ ಹಿಡಿದಿದ್ದರು. ಸಿಮಂದರ್ ಸ್ವಾಮೀಜಿ ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ್ದರು. ನಾನು 12ನೇ ವಯಸ್ಸಿನಲ್ಲಿ ದೀಕ್ಷೆ ಪಡೆಯುತ್ತೇನೆ ಎಂದು ಹೇಳಿದಳು.
ಸರ್ಕಾರಿ ಉದ್ಯೋಗಿಯಾಗಿರುವ ಖುಷಿ ತಂದೆ ವಿನಿತ್ ಶಾ ಹಾಗೂ ತಾಯಿ ಮಗಳ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮಗಳು ತನ್ನ ಆಂತರ್ಯದ ಬಗ್ಗೆ ತಿಳಿದುಕೊಂಡಿದ್ದಾಳೆ. ಇದು ಎಲ್ಲ ಮಕ್ಕಳಲ್ಲಿ ಬರುವುದಿಲ್ಲ. ನಮ್ಮ ಮಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಸನ್ಯಾಸಿಯಾಗಿ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ತರಲಿ ಎಂದು ಮಗಳ ನಿರ್ಧಾರಕ್ಕೆ ತಂದೆ-ತಾಯಿ ಶುಭ ಹಾರೈಸಿದರು.