ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ನಗರದಲ್ಲಿ ಹಲವೆಡೆ ಮಳೆರಾಯ ಮತ್ತೆ ತಂಪೆರೆದಿದ್ದಾನೆ. ವಿದ್ಯಾರಣ್ಯಪುರ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆ ಬೀದ್ದಿದ್ದು, ಕಾರ್ಪೊರೇಷನ್, ಬನಶಂಕರಿ, ಕೆಂಗೇರಿ, ಮಲ್ಲೇಶ್ವರ, ವಿಧಾನಸೌಧ ಸುತ್ತಮುತ್ತಲಿನ ಭಾಗದಲ್ಲಿ ಗುಡುಗಿನಿಂದ ಕೂಡಿದ ಸಾಧಾರಣ ಮಳೆಯಾಗಿದೆ.
ಮುಂದಿನ 3 ದಿನಗಳ ಕಾಲ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಇವತ್ತು ಸಹ ಮಳೆಯ ಅಬ್ಬರ ಮುಂದುವರೆಯಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೋಲಾರ, ಚಿಕ್ಕಬಳಾಪುರ, ಚಾಮರಾಜನಗರ, ಬೀದರ್, ಕೊಪ್ಪಳ, ರಾಯಚೂರು ಸೇರಿ ರಾಜ್ಯದ ಹಲವೆಡೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಹೀಗಾಗಿ, ಜನ ಈಗಲೇ ಮುನ್ನೆಚ್ಚರಿಕೆ ವಹಿಸಿದರೆ ಮಳೆಯಿಂದ ಆಗುವ ತೊಂದರೆಯಿಂದ ಪಾರಾಗಬಹುದಾಗಿದೆ.