ಸೂರತ್, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಹಿನ್ನಡೆಯಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ನಾರಾಯಣ ಸಾಯಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ ಸೂರತ್ ಕೋರ್ಟ್ ನಾರಾಯಣ ಸಾಯಿ ಅಪರಾಧಿ ಎಂದಿದ್ದು, ಶಿಕ್ಷೆ ಪ್ರಮಾಣ ಏಪ್ರಿಲ್ 30 ರಂದು ಘೋಷಣೆ ಮಾಡಲಿದೆ. ನಾರಾಯಣ ಸಾಯಿ ವಿರುದ್ಧ ಇಬ್ಬರು ಸಹೋದರಿಯರು ಅತ್ಯಾಚಾರದ ದೂರು ದಾಖಲಿಸಿದ್ದರು. ನಾರಾಯಣ ಸಾಯಿಯ ಸಹಾಯಕರನ್ನೂ ಕೋರ್ಟ್ ದೋಷಿಗಳು ಎಂದು ತೀರ್ಪು ನೀಡಿದೆ. ಅಕ್ಟೋಬರ್ 2013 ರಲ್ಲಿ ನಾರಾಯಣ ಸಾಯಿ ವಿರುದ್ಧ ದೂರು ದಾಖಲಾಗಿತ್ತು. ಇಬ್ಬರು ಸಹೋದರಿಯರಲ್ಲಿ ಒಬ್ಬರು ಅಸಾರಾಂ ವಿರುದ್ಧ ಹಾಗೂ ಇನ್ನೊಬ್ಬರು ಸಾಯಿ ವಿರುದ್ಧ ದೂರು ನೀಡಿದ್ದರು. ಸೂರತ್ ಆಶ್ರಮದಲ್ಲಿದ್ದಾಗ 2002 ರಿಂದ 2005 ರವರೆಗೆ ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೀಡಿತೆ ದೂರಿನಲ್ಲಿ ಹೇಳಿದ್ದಳು. ನಾರಾಯಣ ಸಾಯಿ ಪತ್ನಿ ಕೂಡ ಪತಿ ವಿರುದ್ಧ ದೂರು ನೀಡಿದ್ದಳು. ಆಶ್ರಮದ ಹುಡುಗಿಯರ ಜೊತೆ ಸಾಯಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ದೂರು ದಾಖಲಿಸಿದ್ದಳು. ಆಶ್ರಮದ ಮಹಿಳೆಯೊಬ್ಬಳನ್ನು ನಾರಾಯಣ ಸಾಯಿ ಗರ್ಭಿಣಿ ಮಾಡಿದ್ದ. ಕೌಟುಂಬಿಕ ಹಿಂಸೆ ನೀಡ್ತಿದ್ದ ಎಂದು ಪತ್ನಿ ಆರೋಪಿಸಿದ್ದಳು.