ಮಂಡ್ಯ, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತಾಗಿದೆ ಮಂಡ್ಯ ಚುನಾವಣೆ. ಎಲೆಕ್ಷನ್ ಮುಗಿದ ಬಳಿಕವೂ ಅಭಿಷೇಕ್ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಪರೋಕ್ಷವಾಗಿ ಟಾಂಗ್ ಕೊಡೋದು ಮುಂದುವರೆದಿದೆ. ಚುನಾವಣೆ ಬಳಿಕ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್ ಸಿಂಗಾಪುರಕ್ಕೆ ಹೋಗ್ತಾರೆ ಎಂಬ ಗಾಸಿಪ್ ಹಬ್ಬಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಅಭಿಷೇಕ್, ಇದಕ್ಕೆಲ್ಲಾ ತಮ್ಮ ಪ್ರತಿಸ್ಪರ್ಧಿಗಳೇ ಕಾರಣ ಅಂತಾ ಕಿಡಿಕಾರಿದ್ರು. ಅಲ್ಲದೆ ಚುನಾವಣೆಗೆ ಬಳಿಕ ಮಂಡ್ಯದ ಮಹಾವೀರ್ ಸರ್ಕಲ್ ಗೆ ಬಂದು ಟೀ ಕುಡಿಯುವುದಾಗಿ ಹೇಳಿದ್ರು. ಅದರಂತೆಯೇ ಚುನಾವಣೆ ಬಳಿಕ ಮಹಾವೀರ್ ಸರ್ಕಲ್ ನಲ್ಲಿ ಬಂದು ಟೀ ಕುಡಿದು ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ರು. ಅಭಿಷೇಕ್ ಹೀಗೆ ಹೇಳುತ್ತಿದ್ದಂತೆ, ಅಂಬಿ ಅಭಿಮಾನಿಗಳು ನಿಖಿಲ್ ವಿದೇಶಕ್ಕೆ ಹೋಗಿದ್ದಾರೆ ಅಂತಾ ಮಾತನಾಡಲು ಶುರುಮಾಡಿದ್ರು. ಇಷ್ಟೆಲ್ಲಾ ಆಗ್ತಿದ್ದಂತೆ ಮಂಡ್ಯದಲ್ಲಿ ಏಕಾಏಕಿ ಪ್ರತ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ನಾನು ರಾಜ್ಯ ಬಿಟ್ಟು ಎಲ್ಲೂ ಹೋಗಿಲ್ಲ. ನನಗಾಗದವರು ಇಲ್ಲ ಸಲ್ಲದ ಗಾಸಿಪ್ ಹಬ್ಬಿಸುತ್ತಿದ್ದಾರೆ. ಹಿಂದೆ ಹೇಳಿದಂತೆ ಮಂಡ್ಯದಲ್ಲೇ ಜಮೀನು ಕೊಂಡು ಮನೆ ಕಟ್ಟಿಸಿಕೊಳ್ತೀನಿ ಅಂತಾ ತಿರುಗೇಟು ನೀಡಿದ್ದಾರೆ.