ಯುಪಿ, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ಅಭ್ಯರ್ಥಿ ಜಯಪ್ರದಾ ಕುರಿತು ಅವಹೇಳನಕಾರಿ ಮಾತನ್ನಾಡಿ ವಿವಾದಕ್ಕೀಡಾದ ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಇದೀಗ ಸಾರ್ವಜನಿಕ ಸಭೆಯಲ್ಲಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ. ನಾನು ದೇಶ ವಿರೋಧಿ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ, ವಿಶ್ವದಲ್ಲೇ ನಾನೊಬ್ಬ ದೊಡ್ಡ ಉಗ್ರವಾದಿ ಎಂಬ ರೀತಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅವರಿಗಿರುವ ಆಡಳಿತ ಶಕ್ತಿಯನ್ನು ಬಳಸಿಕೊಂಡು ಮಾತಿನಲ್ಲೇ ಗುಂಡುಹಾರಿಸಿದರು ಎಂದು ಎದುರಾಳಿಗಳನ್ನು ಟೀಕಿಸಿದರು. ಚುನಾವಣೆ ಆಯೋಗ ಮೂರು ದಿನಗಳ ನಿಷೇಧ ಹೇರಿದ್ದಕ್ಕೂ ಪ್ರತಿಕ್ರಿಯೆ ನೀಡಿರುವ ಅಜಂ, ನಿಷೇಧ ಅವಧಿಯಲ್ಲಿ ನಾನು ಎಲ್ಲಿಗೂ ಹೋಗಿಲ್ಲ. ಯಾರೊಬ್ಬರನ್ನೂ ಭೇಟಿಯಾಗಿಲ್ಲ, ರ್ಯಾಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳಲಿಲ್ಲ ಎಂದರು. ರಾಂಪುರದಲ್ಲಿ ಆಡಳಿಂತ ಯಂತ್ರವು ಭಯಂಕರ ರೀತಿಯಲ್ಲಿ ನನ್ನ ವಿರುದ್ಧ ಕೆಲಸ ಮಾಡುತ್ತಿದೆ. ನನ್ನನ್ನು ಪ್ರೀತಿಸುವ ಜನರಿಗೆ ಕಿರುಕುಳ ನೀಡಲಾಗಿದೆ ಎಂದರು. ರಾಂಪುರದಲ್ಲಿ ಆಕೆಯನ್ನು (ಜಯಪ್ರದಾ) ಯಾರೊಬ್ಬರೂ ಸ್ಪರ್ಶಿಸದಂತೆ 17 ವರ್ಷದಿಂದ ನೋಡಿಕೊಂಡಿದ್ದೇನೆ. ಆದರೆ, ಆಕೆ ನಿಜ ಮುಖ ಕಳೆದ 17 ದಿನಗಳಲ್ಲಿ ಗೊತ್ತಾಯಿತು. ಖಾಕಿ ಒಳಉಡುಪು ಧರಿಸಿದ ನಂತರ ತಿಳಿಯಿತು ಎಂದು ಅವರು ಏಪ್ರಿಲ್ 15ರಂದು ಹೇಳಿಕೆ ನೀಡಿದ್ದರು. ಬಳಿಕ ಅವರನ್ನು ಮೂರು ದಿನ ಚುನಾವಣೆ ಪ್ರಚಾರದಿಂದ ನಿಷೇಧಿಸಲಾಗಿತ್ತು.