ಬೆಂಗಳೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಹಣಕಾಸಿನ ವಿಚಾರಕ್ಕೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ, ರಾಜರಾಜೇಶ್ವರಿನಗರ ಕೃಷ್ಣಪ್ಪ ಲೇಔಟ್ ನಲ್ಲಿ ಶವ ಎಸೆದು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೊಸಕೆರೆ ಹಳ್ಳಿಯ ಮೂಕಾಂಬಿಕ ನಗರದ ನಿವಾಸಿ ರಮೇಶ್ (38) ಕೊಲೆಯಾದ ವ್ಯಕ್ತಿ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇಸ್ಪೀಟ್ ಆಡಲು ಹೋಗಿದ್ದರು. ಬಾರ್ನಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಹೊಸಕೆರೆಹಳ್ಳಿ ಬಳಿ ಎಲ್ಲರೂ ಒಂದೆಡೆ ಸೇರಿ ಇಸ್ಪೀಟ್ ಆಟವಾಡುತ್ತಿದ್ದರು. ಆಟದಲ್ಲಿ ರಮೆಶ್ ಸ್ನೇಹಿತ ಚಿನ್ಮಯ್ ಎಂಬಾತ ಗೆದ್ದಿದ್ದ.
ಆದರೆ, ಆಟವಾಡುತ್ತಿದ್ದ ಮಹದೇವ್ ಎಂಬಾತ ಚಿನ್ಮಯ್ ಕೈಯಿಂದ ಈ ಹಣವನ್ನು ಕಸಿದುಕೊಂಡು ಹೋಗಿದ್ದ. ಈ ವಿಚಾರವಾಗಿ ಸ್ನೇಹಿತರ ನಡುವೆ ಜಗಳ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಚಿನ್ಮಯ್ ಸ್ನೆಹಿತ ಮಹದೇವ್ನಿಂದ ಹಣ ತೆಗೆದುಕೊಂಡು ಸಂಜೆ 7 ಗಂಟೆಗೆ ಬರುವಂತೆ ರಮೇಶ್ಗೆ ಕರೆ ಮಾಡಿ ತಿಳಿಸಿದ್ದ.
ಅದರಂತೆ ಸ್ನೇಹಿತರೊಂದಿಗೆ ಮಾತನಾಡಿ ಬರುವುದಾಗಿ ಪತ್ನಿ ಬಳಿ ಹೇಳಿ ಸಂಜೆ 7 ಗಂಟೆಗೆ ಮನೆಯಿಂದ ರಮೇಶ್ ಹೊರ ಹೋಗಿದ್ದರು. ಮಹದೇವ್ ಮತ್ತು ಆತನ ಸ್ನೇಹಿತರ ಬಳಿ ಹೋದ ರಮೇಶ್ ಇಸ್ಪೀಟ್ನಲ್ಲಿ ಗೆದ್ದ ಚಿನ್ಮಯ್ಗೆ ಸೇರಿದ ಹಣ ನೀಡುವಂತೆ ಬೆದರಿಸಿದ್ದ. ಇದರಿಂದ ಆಕ್ರೋಶಗೊಂಡ ಮಹದೇವ್ ಮತ್ತು ಇತರರು ಹಣ ನೀಡುವುದಾಗಿ ರಮೇಶ್ನನ್ನು ಆಟೋರಿಕ್ಷಾದಲ್ಲಿ ರಾಜರಾಜೇಶ್ವರಿನಗರದ ಬಂಗಾರಪ್ಪ ಗುಡ್ಡೆ ಬಳಿ ಕರೆದುಕೊಂಡು ಹೋಗಿದ್ದರು.
ಅಲ್ಲಿ ರಮೇಶ್ ತಲೆಗೆ ರಾಡ್ನಿಂದ ಹೊಡೆದು, ಚೂರಿಯಿಂದ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ. ನಂತರ ರಮೇಶ್ ಶವವನ್ನು ಆಟೋರಿಕ್ಷಾದಲ್ಲಿ ರಾಜರಾಜೇಶ್ವರಿ ನಗರದ ಕೃಷ್ಣಪ್ಪ ಲೇಔಟ್ ಬಳಿ ತಂದು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.