ಬೆಂಗಳೂರು, ಏ. 4, ನ್ಯೂಸ್ ಎಕ್ಸ್ ಪ್ರೆಸ್: ಆರಾಧನಾ ಭಟ್ ಪುಟಾಣಿ ಪವರ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಆಡಿಯೋ ನಿನ್ನೆಯಷ್ಟೆ ರಿಲೀಸ್ ಆಗಿದೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ. ಬಾಲಕಲಾವಿದೆ ಆರಾಧನಾ ಭಟ್ ಜಸ್ಟ್ 9ನೇ ತರಗತಿ ಓದುತ್ತಿದ್ದಾಳೆ. ಅದಾಗಲೇ ಈ ದಕ್ಷಿಣ ಕನ್ನಡ ಪ್ರತಿಭೆ 9 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಅರುಳು ಹುರಿದಂತೆ ಪಟಪಟ ಮಾತನಾಡಿರುವ ಆರಾಧನಾ, ‘ಪುಟಾಣಿ ಪವರ್’ ಧ್ವನಿ ಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಎಲ್ಲರ ಮೆಚ್ಚುಗೆ ಪಡೆದಳು. ಈಕೆ ಚಿಕ್ಕ ವಯಸ್ಸಿನಲ್ಲೇ ಸ್ನೇಹಿತರ ಜೊತೆ ಸೇರಿ ‘ಆರದಿರಲಿ ಬದುಕು ಆರಾಧನ ತಂಡ’ ಸ್ಥಾಪಿಸಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಈ ಪುಟ್ಟ ಹುಡುಗಿ ನೋಡಲಿಕ್ಕೆ ರೂಪವತಿ. 2015 ರಲ್ಲೇ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ.ಬಿ ಅವರ ಸಂಗೀತ ಸಂಜೆಯ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿ ಭೇಷ್ ಅನ್ನಿಸಿಕೊಂಡವಳು. ಆಮೇಲೆ ಹಲವಾರು ವೇದಿಕೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಳು. ರಾಜಗಿರಿ ಹಾಗೂ ಪದ್ಮಶ್ರೀ ಅವರ ಪುತ್ರಿ ಅನುರಾಧಾ ಕಲರ್ಸ್ ಸೂಪರ್ನ ‘ಮಜಾ ಭಾರತ’ ಹಾಸ್ಯ ಕಾರ್ಯಕ್ರಮದಲ್ಲಿ ಸಹ ಮಿಂಚಿದಳು. ಈಗ ‘ಪುಟಾಣಿ ಪವರ್’ ಕನ್ನಡ ಚಿತ್ರದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾಳೆ. ಈ ಸಿನಿಮಾದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಈ ಪುಟ್ಟ ಹುಡುಗಿ ಹೋರಾಡುತ್ತಾಳೆ. ಶಿಕ್ಷಣದ ಜೊತೆ ನಟನೆ ಮುಂದುವರೆಸಿಕೊಂಡು ಹೋಗಬೇಕು ಎಂಬುದು ಆರಾಧನಾ ಭಟ್ ಆಸೆ.