ಬೆಂಗಳೂರು, ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ತಲೆ, ಭುಜದ ಮೇಲೆ ಕೋತಿಗಳನ್ನ ಕುಳ್ಳಿರಿಸಿಕೊಂಡು, ಮಕ್ಕಳಿಗೆ ಊಟ ತಿನ್ನಿಸಿದಂತೆ ಮಂಗಗಳಿಗೆ ಕೈತುತ್ತು ನೀಡುತ್ತಿರೋ ಈ ವ್ಯಕ್ತಿಯ ಹೆಸರು ಮುರಳಿ ಅಲಿಯಾಸ್ ಮಾರುತಿ. ದೇವನಹಳ್ಳಿಯ ನಿವಾಸಿಯಾಗಿರುವ ಈತ ಪಕ್ಕಾ ವಾನರ ಪ್ರೇಮಿ. ಬಡ ಕುಟುಂಬದಲ್ಲಿ ಹುಟ್ಟಿ 7ನೇ ತರಗತಿವರೆಗೂ ಓದಿರುವ ಮಾರುತಿ ಮನೆಯ ಎಲ್ಲಾ ಕೆಲಸಗಳ ಜೊತೆ ಏರಿಯಾದಲ್ಲಿರುವ ಕೋತಿಗಳನ್ನು ಸಾಕುತ್ತಿದ್ದಾನೆ. ಸ್ಥಳೀಯರಿಂದ 10, 20 ರೂಪಾಯಿ ಹಣ ಪಡೆದು ಅದೇ ಹಣದಲ್ಲಿ ಕೋತಿಗಳ ಹೊಟ್ಟೆ ತುಂಬಿಸಿ ಸಂತೋಷ ಪಡ್ತಿದ್ದಾನೆ. ಇನ್ನು ಈತನ ಹುಚ್ಚು ಅಭಿಮಾನ ನೋಡಿದ ಸ್ಥಳೀಯ ಅಧಿಕಾರಿಗಳು, ಈತನಿಗೆ ಫ್ಯಾನ್ಸ್ ಆಗಿ, ಸಹಾಯ ಕೂಡ ಮಾಡಿದ್ದಾರಂತೆ. ಹಲವು ಬಾರಿ ಕಪಿಗಳ ಚೇಷ್ಟೆಯಿಂದ ಸಂಕಷ್ಟಕ್ಕೆ ಸಿಲುಕಿದರೂ ಮಾರುತಿಗೆ ಮಾತ್ರ ಅವುಗಳ ಮೇಲಿನ ಪ್ರೀತಿ ಕಿಂಚಿತ್ತೂ ಮಾಸಿಲ್ಲ್ಲ ಅನ್ನೋದು ಸ್ಥಳೀಯರ ಮಾತು. ಅಂತೆಯೇ ಚಿಕ್ಕ ವಾನರ ಸೈನ್ಯವನ್ನು ಕಟ್ಟಿಕೊಂಡಿದ್ದಲ್ಲದೇ, ಕೋತಿಗಳ ಮೇಲಿನ ಪ್ರೀತಿಗಾಗಿ ತನ್ನ ಹೆಸರನ್ನೇ ಮಾರುತಿ ಅಂತ ಬದಲಾಯಿಸಿಕೊಂಡಿದ್ದಾನೆ. ಇನ್ನು ವಿಶೇಷ ಅಂದ್ರೆ ತನ್ನ ಕೋತಿಗಳಿಗೆ ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ, ಉಮಾಶ್ರೀ, ಮುನೇಗೌಡ ಅಂತಾ… ರಾಜಕೀಯ ನಾಯಕರ ಹಾಗೂ ನಟ, ನಟಿಯರ ಹೆಸರಿಟ್ಟಿದ್ದಾನೆ. ಇನ್ನು ಮಾರುತಿ ಬಂದು ಕೋತಿಗಳನ್ನು ಕರೆದ್ರೆ ಸಾಕು, ಎಲ್ಲವೂ ಒಂದೊಂದಾಗೇ ಬಂದು ಈತನ ಹೆಗಲೇರುತ್ತವೆ. ಅಷ್ಟೇ ಏಕೆ ಕಪಿಗಳು ಚೇಷ್ಟೇ ಮಾಡ್ತಿದ್ರೆ ಈತ ಕಣ್ಸನ್ನೆ ಮಾಡಿದ್ರೆ ಸಾಕು… ಸುಮ್ಮನಾಗಿಬಿಡ್ತವೆ. ಅಷ್ಟರಮಟ್ಟಿಗೆ ಕೋತಿಗಳನ್ನು ಮಾರುತಿ ಸಾಕಿದ್ದಾನೆ. ಒಂದೊಂದು ಏರಿಯಾದ ಕೋತಿಗಳಿಗೆ ಒಂದೊಂದು ಹೆಸರಿಟ್ಟಿರುವುದಷ್ಟೇ ಅಲ್ಲ, ಯಾವ ಕೋತಿಯ ವಯಸ್ಸು ಎಷ್ಟು ಅಂತ ಪಟಪಟನೇ ಹೇಳ್ತಾನೆ. ಸತತ 15-20 ವರ್ಷಗಳಿಂದ ಮಂಗಗಳ ಮೇಲೆ ವಿಶೇಷ ಪ್ರೀತಿ ತೋರುತ್ತಿರುವ ಮಾರುತಿಗೆ ಸದ್ಯ 800 ಕ್ಕೂ ಹೆಚ್ಚು ಕೋತಿಗಳು ಸ್ನೇಹಿತರಾಗಿದ್ದಾರೆ.