ಬೈಲಹೊಂಗಲದ ದೇಶನೂರಿನಲ್ಲಿ ಚರ್ಚ್ ಕಮ್ ದೇವಸ್ಥಾನ…!

ಬೈಲಹೊಂಗಲದ ದೇಶನೂರಿನಲ್ಲಿ ಚರ್ಚ್ ಕಮ್ ದೇವಸ್ಥಾನ…!

ಬೆಳಗಾವಿ, ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ದೂರದಿಂದ ನೋಡಿದ್ರೆ ಚರ್ಚ್ ರೀತಿ ಕಾಣುವ ಈ ಕಟ್ಟಡ ದೇಶದ ಹೊಸ ಭಾವ್ಯಕ್ಯತೆಯ ತಾಣ. ಈ ಪವಿತ್ರ ಕಟ್ಟಡ ಪ್ರವೇಶಿಸಿದ್ರೆ ಸಾಕು ದೇವಸ್ಥಾನ ಕಾಣಸಿಗುತ್ತದೆ. ಇದೇನಪ್ಪ ಚರ್ಚ್, ದೇವಸ್ಥಾನಗಳೆರಡೂ ಒಂದೇ ಕಡೆ ಇದೆಯಲ್ಲ ಅಂತಾ ಒಂದ್ ಕ್ಷಣ ಅಚ್ಚರಿಪಡ್ತೀರಿ… ಆದ್ರೆ ನಿಮ್ಮ ಅಚ್ಚರಿ ಇಲ್ಲಿ ಕಾರ್ಯತಃ ನಿಜವಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿರುವ ಈ ಕಟ್ಟಡದ ಒಂದು ಭಾಗದಲ್ಲಿ ಶಿವಲಿಂಗವಿದ್ರೆ ಮತ್ತೊಂದು ಭಾಗದಲ್ಲಿ ಏಸುಕ್ರಿಸ್ತನ ಪ್ರತಿಮೆಯಿದೆ. ವಿಶೇಷವೆಂದ್ರೆ 16ನೇ ಶತಮಾನದಿಂದಲೂ ಇಲ್ಲಿ ಶಿವನ ಆರಾಧನೆ ಹಾಗೂ ಏಸುವಿನ ಪ್ರಾರ್ಥನೆ ಒಟ್ಟೊಟ್ಟಿಗೆ ನೆರವೇರುತ್ತಿದೆಯಂತೆ. ಕಾವಿಧಾರಿಯಾಗಿರುವ ಇಲ್ಲಿನ ಫಾದರ್, ನಿತ್ಯ ಗಂಟೆ ಬಾರಿಸಿ, ಆರತಿ ಎತ್ತಿ ಹಿಂದೂ ಸಂಪ್ರದಾಯದಂತೆ ಶಿವಲಿಂಗ ಹಾಗೂ ಏಸುಕ್ರಿಸ್ತರ ಪೂಜೆ ಸಲ್ಲಿಸುತ್ತಾರೆ. ವಿಶೇಷ ಅಂದ್ರೆ ಕ್ರಿಶ್ಚಿಯನ್ ಸಮುದಾಯದ ಫಾದರ್ ಕಾವಿ ಧರಸಿದ್ದಲ್ಲದೇ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಗೆ ವಿಭೂತಿ ಕೂಡ ಧರಿಸುತ್ತಾರೆ. ಭಾವೈಕ್ಯತೆಯ ಈ ಮಂದಿರಕ್ಕೆ ಎಲ್ಲ, ಜಾತಿ, ಧರ್ಮಿಯರು ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇನ್ನು ಈ ಆವರಣದಲ್ಲಿ ಪ್ರಾಥಮಿಕ ಶಾಲೆ, ಅನಾಥಾಲಯವಿದೆ. ಅಷ್ಟೆ ಏಕೆ ರೋಗಿಗಳಿಗೆ ಗಿಡಮೂಲಿಕೆಯ ಔಷಧ ಉಚಿತವಾಗಿ ನೀಡಿ ಉಪಚರಿಸುವ ಸಂಪ್ರದಾಯ ಕೂಡ ಇಲ್ಲಿದೆ.

16ನೇ ಶತಮಾನದಲ್ಲಿ ಸೇಂಟ್ ಜಾನ್ ಪಿಂಟೋ ಎಂಬುವವರು ಈ ಕಟ್ಟಡ ನಿರ್ಮಿಸಿದ್ದಾರೆ. ನಂತರ ಇಲ್ಲಿ ಬರುವ ಬಹುತೇಕ ಸ್ವಾಮೀಜಿಗಳು, ಫಾದರ್​ಗಳು ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ. ವಿಶೇಷವೆಂದ್ರೆ ಇಲ್ಲಿ ಮುಖ್ಯವಾಗಿ ಭಾರತೀಯ ಸಂಸ್ಕೃತಿಯ ಪ್ರಚಾರ ಕಾರ್ಯ ಕೂಡ ಸಾಗುತ್ತಿದೆ. ಹೀಗಾಗಿ ಈ ಕಟ್ಟಡದ ಬಗ್ಗೆ ಸ್ಥಳೀಯರಲ್ಲಿ ವಿಶೇಷ ಗೌರವವಿದೆ. ಅಂತೆಯೇ ಸ್ಥಳೀಯರು ಕೈಲಾದಷ್ಟು ದವಸ-ಧಾನ್ಯ, ಕಾಣಿಕೆ ನೀಡುತ್ತಿದ್ದಾರೆ. ಸುತ್ತಲೂ ಹಚ್ಚ ಹಸರಿನ ಗುಡ್ಡದ ಮಧ್ಯದಲ್ಲಿರುವ ದೇಶನೂರು ಗ್ರಾಮದ ಜನಸಂಖ್ಯೆ ಕೇವಲ 5 ಸಾವಿರ. ಗಮನಿಸಬೇಕಾದ ವಿಷ್ಯ ಅಂದ್ರೆ ಗ್ರಾಮದಲ್ಲಿ ಒಬ್ಬರೂ ಕ್ರಿಶ್ಚಿಯನ್ ಧರ್ಮಿಯರಿಲ್ಲ. ಆದ್ರೆ ಇಲ್ಲಿನ ಹಿಂದೂಗಳೇ ಶಿವಲಿಂಗನ ಆರಾಧನೆ ಜತೆಗೆ ಏಸುಕ್ರಿಸ್ತರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸೋದು ವಿಶೇಷ. ದಿನಬೆಳಗಾದ್ರೆ ಧರ್ಮದ ಹೆಸರಲ್ಲಿ ಕಿತ್ತಾಡೋ ಜನರ ಮಧ್ಯೆ ಈ ಚರ್ಚ್ ಎಲ್ಲರಿಗೂ ಮಾದರಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos