ಬೆಂಗಳೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಏಪ್ರಿಲ್ ತಿಂಗಳು ಬಂತೆಂದರೆ ವಾಹನ ಸವಾರರಿಗೆ ತಲೆ ಬಿಸಿಯಾಗುತ್ತಿತ್ತು. ಪ್ರತಿವರ್ಷವೂ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ದರ ಶೇಕಡ ಹತ್ತರಿಂದ 40 ರಷ್ಟು ಏರಿಕೆಯಾಗುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು ಆದರೆ ವಾಹನ ಮಾಲೀಕರಿಗೆ ಈ ಬಾರಿ ನೆಮ್ಮದಿಯ ಸುದ್ದಿ ಸಿಕ್ಕಿದೆ. ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐ.ಆರ್.ಡಿ.ಎ.ಐ) ಈ ಕುರಿತು ಮಾಹಿತಿ ನೀಡಿದ್ದು, ವಾಹನಗಳ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರಿಮಿಯಂ ದರಗಳು ಏಪ್ರಿಲ್ 1, 2018 ರಲ್ಲಿದ್ದಂತೆ ಮುಂದುವರೆಯಲಿದೆ ಎಂದು ತಿಳಿಸಿದೆ. ಹೀಗಾಗಿ ಏಪ್ರಿಲ್ 2018 ರಲ್ಲಿ ಇದ್ದಂತೆ 75 ಸಿಸಿ ಒಳಗಿನ ದ್ವಿಚಕ್ರ ವಾಹನಗಳಿಗೆ 427 ರೂ., 75 ರಿಂದ 150 ಸಿಸಿ ಒಳಗಿನ ಸ್ಕೂಟರ್ ಹಾಗೂ ಮೋಟಾರ್ ಬೈಕ್ ಗಳಿಗೆ 720 ರೂ, ಅದಕ್ಕೂ ಮೇಲ್ಪಟ್ಟ ಸಿಸಿ ಬೈಕ್ ಗಳಿಗೆ 985 ರೂ. ಪ್ರೀಮಿಯಂ ದರ ಮುಂದುವರೆಯಲಿದೆ. ಅದೇ ರೀತಿ ಸಣ್ಣ ಕಾರುಗಳ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ದರ 1,850 ರೂ. ಗಳಾಗಿದ್ದು, 1000 ದಿಂದ 1500 ಸಿಸಿ ಹಾಗೂ ಅದಕ್ಕೂ ಮೇಲ್ಪಟ್ಟ ವಾಹನಗಳಿಗೆ 2,863 ರಿಂದ 7,890 ರೂ. ಮುಂದುವರೆಯಲಿದೆ. ಆಟೋಗಳಿಗೆ 2,595 ರೂ. ಹಾಗೂ ಇ ರಿಕ್ಷಾಗಳಿಗೆ 1,685 ರೂ. ವಿಧಿಸಲಾಗುತ್ತದೆ. ವಾಣಿಜ್ಯ ಬಳಕೆಯ ಟ್ಯಾಕ್ಸಿಗಳಿಗೆ 5,437 ಪ್ರೀಮಿಯಂ ದರ ವಿಧಿಸಲಾಗುತ್ತದೆ.