ಚೆನ್ನೈ, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ನಾಯಿಮರಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ 30 ವರ್ಷದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಘಟನೆ ನಡೆದ ಎರಡು ವಾರಗಳ ನಂತರ ಸಿಸಿಟಿವಿ ಆಧಾರಿಸಿ ದೂರು ನೀಡಿದ್ದರು. ಆರೋಪಿಯನ್ನು ಚೆನ್ನೈನ ಮಾಧವರಾಮ್ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ. ಈತ ಮಾರ್ಚ್ 14ರಂದು ಮಾಧವರಾಮ್ ಸಮೀಪದ ಮಾರ್ಥೂರಿನ ಖಾಲಿ ಮೈದಾನದಲ್ಲಿ ನಾಲ್ಕು ನಾಯಿಮರಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧವರಾಮ ಮಿಲ್ಕ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಾಣಿ ಹಕ್ಕುಗಳ ಕಾರ್ಯಕರ್ತ ಸಾಯಿ ವಿಘ್ನೇಶ್ ನೀಡಿದ ದೂರಿನ ಆಧಾರದ ಮೇರೆಗೆ ನಗರದ ಪೊಲೀಸರು ಭಾಸ್ಕರ್ ಮೇಲೆ ಅಶ್ಲೀಲ ಕೃತ್ಯಗಳನ್ನು ಎಸಗುವ ಆರೋಪಗಳಿಗೆ ಅನುಗುಣವಾಗಿ ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿ ಭಾಸ್ಕರ್ ನನ್ನು ಜೈಲಿಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಕಾನೂನಿನ ತಜ್ಞರನ್ನು ಸಂಪರ್ಕಿಸಿದ ನಂತರ ಈ ಕುರಿತು ಎಫ್‍ಐಆರ್ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.