ಮಾ.4, ನ್ಯೂಸ್ ಎಕ್ಸ್ ಪ್ರೆಸ್ ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟನ್ನು ಮತ್ತ ಸೇರ್ಪಡಿಸಲಾಗಿದೆ. ಮಾ 3 ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಕ್ರಿಕೆಟ್ ಆಟವನ್ನು 2022ರಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಸೇರಿಸಿಕೊಂಡಿದೆ.
ಬ್ಯಾಂಕಾಕ್ ನಲ್ಲಿ ನಡೆದ ಒಸಿಎಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಒಸಿಎ ಗೌರವ ಉಪಾಧ್ಯಕ್ಷ ರಣಧೀರ್ ಸಿಂಗ್ ಅವರು ಪಿಟಿಐ ಜೊತೆ ಪ್ರತಿಕ್ರಿಯಿಸಿ, ‘ಹೌದು. 2022ರ ಹ್ಯಾಂಗ್ಝೌ ಏಷ್ಯನ್ ಕ್ರೀಡಾಕೂಟಕ್ಕೆ ಕ್ರಿಕೆಟನ್ನು ಸೇರಿಸಲಾಗಿದೆ’ ಎಂದು ತಿಳಿಸಿದರು.
2010 ಮತ್ತು 2014ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಆಟಗಳಲ್ಲಿ ಒಂದಾಗಿ ಆಡಲಾಗಿದ್ದ ಕ್ರಿಕೆಟನ್ನು 2018ರ ಏಷ್ಯನ್ ಗೇಮ್ಸ್ನಿಂದ ತೆಗೆದುಹಾಕಲಾಗಿತ್ತು. ಇದೀಗ ಜನಪ್ರಿಯ ಕ್ರಿಕೆಟ್ ಆಟವನ್ನು ಮತ್ತೆ ಕ್ರೀಡಾಕೂಟದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದುತಿಳಿದು ಬಂದಿದೆ. ಒಸಿಎಯ ಈ ನಿರ್ಧಾರವನ್ನು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ (ಒಸಿಎ) ಸ್ವಾಗತಿಸಿದೆ.
2022ರ ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಮತ್ತು ಮಹಿಳೆಯರ ಟಿ20 ಮಾದರಿಯ ಕ್ರಿಕೆಟನ್ನು ಸೇರಿಸಿಕೊಳ್ಳಲಾಗಿದೆ ಎಂದು ಒಸಿಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ ಕುರಿತು ಬಿಸಿಸಿಐಗೆ ಒಸಿಎ ಪತ್ರ ಬರೆಯಲಿರುವುದಾಗಿ ಅವರು ತಿಳಿಸಿದ್ದಾರೆ.
ನಲ್ಲಿ