ಬೆಂಗಳೂರು ಉತ್ತರ-ತುಮಕೂರು: ದೇವೇಗೌಡರ ಗೆಲುವು ಸುಲಭವಲ್ಲ!

ಬೆಂಗಳೂರು ಉತ್ತರ-ತುಮಕೂರು: ದೇವೇಗೌಡರ ಗೆಲುವು ಸುಲಭವಲ್ಲ!

ರಾಜಕಾರಣ ಮೊದಲೋ, ದೇವೇಗೌಡರು ಮೊದಲೋ ಎನ್ನುವುದು ಒಂದು ರಾಜಕೀಯ ನಾಣ್ಣುಡಿ. ಆದರೆ ಕಾಂಗ್ರೆಸ್ ಮೊದಲು ಹುಟ್ಟಿತು! ಎನ್ನುವುದು ಇತ್ತೀಚಿಗೆ ಚಾಲ್ತಿಯಲ್ಲಿರುವ ಮಾತು!! ಇದ್ದ ಎರಡು ಸ್ಥಾನಗಳನ್ನು ಮೊಮ್ಮಕ್ಕಳಿಗೆ ಕೊಟ್ಟು, ಇನ್ನೂ ಆರು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದು ರಾಜಕೀಯ ಜಾಣ್ಮೆ ಮೆರೆದ ದೇವೇಗೌಡರಿಗೆ ಕಾಂಗ್ರೆಸ್ಸಿಗರು ತಿರುಮಂತ್ರ ನೀಡುವುದರಲ್ಲಿ ಬ್ಯುಸಿಯಾಗಿದ್ದಾರಂತೆ!!!

ಈಗ ದೇವೇಗೌಡರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳು ಮಾತ್ರ. ಆದರೆ, ಈ ಎರಡೂ ಕ್ಷೇತ್ರಗಳು ಜೆಡಿಎಸ್​ಗೆ ಸುಲಭ ತುತ್ತಲ್ಲ. ಎರಡೂ ಕೂಡ ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರಗಳೇ. ಕಾಂಗ್ರೆಸ್​ನ ಸ್ಥಳೀಯ ಮುಖಂಡರ ಸಂಪೂರ್ಣ ಬೆಂಬಲ ಸಿಕ್ಕರಷ್ಟೇ ಜೆಡಿಎಸ್​ಗೆ ಗೆಲುವು ಸುಲಭ. ಆದರೆ, ಸಿದ್ದರಾಮಯ್ಯನವರ ನಡೆಯನ್ನು ಬಲ್ಲವರು ಹೇಳುವುದೇನೆಂದರೆ, ಜೆಡಿಎಸ್ಸಿಗೆ ಈ ಬಾರಿ ಭರ್ಜರಿ ‘ಒಳೇಟು’ ಬೀಳಲಿದೆ! ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಇರುವ ಜೆಡಿಎಸ್ ಶಾಸಕರು ಕೇವಲ ಇಬ್ಬರೇ. ಕಾಂಗ್ರೆಸ್​ನಿಂದ ಐವರು ಶಾಸಕರಿದ್ಧಾರೆ. ಬಿಜೆಪಿಯ ಒಬ್ಬ ಶಾಸಕರಿದ್ದಾರೆ. ಹಾಲಿ ಸಂಸದ ಕೂಡ ಬಿಜೆಪಿಯವರೇ. ಕಾಂಗ್ರೆಸ್​ನ ಎಲ್ಲಾ ಐವರು ಶಾಸಕರೂ ಸಿದ್ದರಾಮಯ್ಯ ಅವರ ಆಪ್ತರೇ ಆಗಿರುವುದು ದೇವೇಗೌಡರ ಆತಂಕಕ್ಕೆ ಕಾರಣವಾಗಿದೆ. ಉತ್ತರದಲ್ಲಿ ತಾನು ನಿಂತರೆ ಸಿದ್ದರಾಮಯ್ಯ ಅವರ ಆಪ್ತ ಶಾಸಕರು ಸರಿಯಾಗಿ ಸಹಕಾರ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನ ಗೌಡರಿಗೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲೇ ಹೋಗುತ್ತಿದೆ! ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆಯಾದರೂ ಅಲ್ಲಿರುವವರು ಮೊರಸು ಒಕ್ಕಲಿಗರೇ. ದೇವೇಗೌಡರು ಹಾಸನ ಸೀಮೆಯ ಗಂಗಟಕಾರ ಒಕ್ಕಲಿಗರಾಗಿರುವುದರಿಂದ ಅವರಿಗೆ ಹೆಚ್ಚಿನ ಜನಬೆಂಬಲ ಈ ಕ್ಷೇತ್ರದಲ್ಲಿ ಸಿಗುವುದು ಡೌಟು!! ಹಾಗೆಯೇ, ಬೆಂಗಳೂರು ಉತ್ತರ ಕ್ಷೇತ್ರವು ನಗರ ಪ್ರದೇಶವಾದ್ದರಿಂದ ಯುವಕರ ಮನಸ್ಸಲ್ಲಿ ನರೇಂದ್ರ ಮೋದಿ ಅವರೇ ಹೆಚ್ಚು ಆವರಿಸಿಕೊಂಡಿದ್ದಾರೆ. ಹಾಗೆಯೇ, ಬೆಂಗಳೂರಿಗೆ ದೇವೇಗೌಡರು ಏನು ಮಾಡಿದ್ದಾರೆ ಎಂದು ಮೋದಿ ಬೆಂಬಲಿಗರು ಕ್ಯಾಂಪೇನ್ ಮಾಡುತ್ತಿದ್ಧಾರೆ. ಇನ್ನು ಹಿಂದೆ ಬಂದರೆ ಹಾಯದ, ಮುಂದೆ ಬಂದರೆ ಒದೆಯದ ಹಸುವಿನಂತಹ ಗುಣದ ಸದಾ ಹಸನ್ಮುಖಿ ಸದಾನಂದಗೌಡರದು ನಿರುಪದ್ರವಿ ವ್ಯಕ್ತಿತ್ವ! ಇದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರಿಗೆ ಕಂಟಕವಾಗಬಹುದು. ಹೀಗಾಗಿಯೇ ದೇವೇಗೌಡರು ಬೆಂಗಳೂರು ಉತ್ತರದಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚು!
ಇನ್ನು, ತುಮಕೂರಿನಲ್ಲೂ ಜೆಡಿಎಸ್ ಹಾದಿ ಸುಲಭವಿಲ್ಲ. ಹಾಲಿ ಸಂಸದರಾಗಿರುವುದು ಕಾಂಗ್ರೆಸ್​ನ ಮುದ್ದಹನುಮೇಗೌಡರು. ತುಮಕೂರನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವುದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸುಮುರುಸು ತಂದಿದೆ. ತುಮಕೂರಿನ ಬಲಿಷ್ಠ ವ್ಯಕ್ತಿ ಎನಿಸಿರುವ ಡಾ. ಜಿ. ಪರಮೇಶ್ವರ್ ಅವರಿಗೂ ಇದು ಇಷ್ಟವಿಲ್ಲವೆನ್ನಲಾಗಿದೆ. ಇದೇ ವಿಚಾರವಾಗಿ ಜಿ. ಪರಮೇಶ್ವರ್ ಅವರು ದೇವೇಗೌಡರನ್ನು ಭೇಟಿಯಾಗಿ ತುಮಕೂರನ್ನು ಕಾಂಗ್ರೆಸ್​ಗೇ ಬಿಟ್ಟುಕೊಡಬೇಕೆಂದು ಮನವಿ ಮಾಡಿರುವ ವಿಷಯ ಮಾಧ್ಯಮಗಳಿಗೆ ಗೊತ್ತಾಗಿದೆ. ತುಮಕೂರಿನಲ್ಲಿ ಜೆಡಿಎಸ್​ಗೆ ನೆಲೆ ಇರುವುದು ನಿಜವೇ. ಇಲ್ಲಿ ಒಕ್ಕಲಿಗರು, ದಲಿತರು ಮತ್ತು ಓಬಿಸಿ ವರ್ಗಗಳು ಜೆಡಿಎಸ್​ಗೆ ಬೆಂಬಲ ಕೊಡಬಹುದು. ಆದರೆ, ಸಾಕಷ್ಟು ಸಂಖ್ಯೆಯಲ್ಲಿರುವ ಕುರುಬರು ಮತ್ತು ಲಿಂಗಾಯತರು ಈ ಪಕ್ಷಕ್ಕೆ ಮತ ಹಾಕುವುದು ಅನುಮಾನವೇ. ಸಂಸದ ಮುದ್ದಹನುಮೇಗೌಡ, ಡಿಸಿಎಂ ಪರಮೇಶ್ವರ್, ಸಚಿವ ವೆಂಕಟರಮಣಪ್ಪ, ಕೆ.ಎನ್. ರಾಜಣ್ಣ ಸಣ್ಣ ಮಟ್ಟದಲ್ಲಿ ಬಂಡಾಯ ಸಾರುತ್ತಿದ್ದಾರೆ. ಹಾಗೆಯೇ, ತುಮಕೂರಿನ ಭಾಗಕ್ಕೆ ಹೇಮಾವತಿ ನೀರು ಕೊಡಲು ಹೆಚ್.ಡಿ. ರೇವಣ್ಣ ವಿರೋಧಿಸಿದ್ದು ಇಲ್ಲಿನವರಿಗೆ ಜೆಡಿಎಸ್ ಮೇಲೆ ಸಿಟ್ಟು ತರಿಸಿದೆ. ಕ್ಯಾಬಿನೆಟ್ ವಿಷಯದಲ್ಲಿ ಮಾಜಿ ಸಚಿವ ಸತ್ಯನಾರಾಯಣ ಮುಂತಾದವರಿಗೆ ಒಳಿಗೊಂದೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಹಾಗೇನಾದರೂ ಆದರೆ ಜೆಡಿಎಸ್​ಗೆ ಮತ್ತು ದೇವೇಗೌಡರಿಗೆ ತುಮಕೂರು ಕಬ್ಬಿಣ ಕಡಲೆಯಾಗಬಹುದು.

ಫ್ರೆಶ್ ನ್ಯೂಸ್

Latest Posts

Featured Videos