ಬೆಂಗಳೂರು: ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಇರುವಂತಹ ಅದೆಷ್ಟೋ ಸಮಸ್ಯೆಗಳು ದೂರವಾಗುವುದರ ಜೊತೆಗೆ ನಮ್ಮ ದೇಹವು ಕೂಡ ಆರೋಗ್ಯವಾಗಿರುತ್ತದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದರು.
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ, ಸಂಸದ ತೇಜಸ್ವಿ ಸೂರ್ಯ ಮತ್ತು ಅಥಯೋಗ ಲಿವಿಂಗ್ ಸಹಯೋಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಯೋಗಾರಂಭ ವಿಶೇಷ ಯೋಗ ಕಾರ್ಯಕ್ರಮದಲ್ಲಿ 1,500ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು.
ಯೋಗಾಭ್ಯಾಸಿಗಳು, ಸ್ವಾಸ್ಥ್ಯ ಆಕಾಂಕ್ಷಿಗಳು, ವಿದೇಶಿ ರಾಜತಾಂತ್ರಿಕರು, ಅನಿವಾಸಿ ಭಾರತೀಯರು ಮತ್ತು ಸಮಾಜದ ವಿವಿಧ ಸ್ತರದ ನಾಗರಿಕರು ಈ ಆಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಯೋಗದ ಸ್ಫೂರ್ತಿ ಮತ್ತು ಸಂಪ್ರದಾಯವನ್ನು ಆಚರಿಸಿದ್ದು ವಿಶೇಷ. ಭಾಗವಹಿಸಿದ ಸಾರ್ವಜನಿಕರು ಸರಣಿ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಉತ್ತೇಜಿಸುವ ಭಾರತದ ಪ್ರಾಚೀನ ಜ್ಞಾನವನ್ನು ಪ್ರಸ್ತುತಪಡಿಸಿದರು. ಇದನ್ನೂ ಓದಿ: ಆಧುನಿಕ ಜಗತ್ತಿನಲ್ಲಿ ಯೋಗ ಬೇಕೇ ಬೇಕು: ಲಕ್ಷ್ಮೀ ಹೆಬ್ಬಾಳಕರ್
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ ರವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಹೇಗೆ ಆತ್ಮೀಯವಾಗಿ ಸ್ವೀಕರಿಸಲಾಗಿದೆ ಎಂಬುದನ್ನು ಒತ್ತಿ ಹೇಳಿದರು. ಯೋಗದ ಸಮಕಾಲೀನ ಮಹತ್ವವನ್ನು ಒತ್ತಿ ಹೇಳಿದ ಸೂರ್ಯ, “ಯೋಗವು ಕೇವಲ ಭಾರತೀಯರಿಗೆ ಮಾತ್ರವಲ್ಲದೆ, ಇಡೀ ಮಾನವಕುಲಕ್ಕೆ ಜೀವನಶೈಲಿಯ ಮಂತ್ರವಾಗಿದೆ. ಅಮೆರಿಕಕ್ಕೆ ಸರ್ವಪಕ್ಷ ನಿಯೋಗದ ಭಾಗವಾಗಿ ಪ್ರಯಾಣಿಸುವಾಗ, ಭಾರತದ ಸಂಸ್ಕೃತಿ ಮತ್ತು ಅನಾದಿ ಕಾಲದ ಜ್ಞಾನವು ಜಾಗತಿಕ ಸಂಭಾಷಣೆಗಳ ಕೇಂದ್ರಬಿಂದುವಾಗಿರುವುದನ್ನು ನೋಡಿ ನನಗೆ ಸಂತೋಷವಾಯಿತು. ನಮ್ಮ ಅನೇಕ ಸಂವಾದಗಳಲ್ಲಿ, ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಯೋಗ ಮತ್ತು ಆಯುರ್ವೇದದ ಪ್ರಾಮುಖ್ಯತೆಯ ಬಗ್ಗೆ ನಾವು ಮಾತನಾಡಿದ್ದೇವೆ ಮತ್ತು ಈ ಪ್ರಾಚೀನ ವಿಜ್ಞಾನಗಳು ಆಧುನಿಕ ವಿಶ್ವದ ಆರೋಗ್ಯ ಸವಾಲುಗಳಿಗೆ ಹೇಗೆ ಪರಿಹಾರಗಳನ್ನು ಒದಗಿಸುತ್ತಿವೆ ಎಂಬುದನ್ನು ಚರ್ಚಿಸಿದೆವು” ಎಂದು ಹೇಳಿದರು.