ಸಾಮೂಹಿಕ ವಿವಾಹ ಕಾರ್ಯಕ್ರಮ

ಸಾಮೂಹಿಕ ವಿವಾಹ ಕಾರ್ಯಕ್ರಮ

ಬೆಳಗಾವಿ, ಫೆ. 26: ರಾಜ್ಯದ ‘ಎ’ ಶ್ರೇಣಿಯ ದೇವಸ್ಥಾನಗಳು ಮಾತ್ರವಲ್ಲದೇ ಸಂಪನ್ಮೂಲ ಕ್ರೋಢೀಕರಿಸಿ ‘ಬಿ’ ಮತ್ತು ‘ಸಿ’ ಶ್ರೇಣಿಯ ದೇವಸ್ಥಾನಗಳಲ್ಲಿ ಕೂಡ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಎಂದು ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ  ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿರುವ “ಸಪ್ತಪದಿ” ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳು ಎಲ್ಲ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 1000 ಜೋಡಿ ವಿವಾಹ-ಸಚಿವರ ಆಶಯ: ಬೆಳಗಾವಿಯಂತಹ ದೊಡ್ಡ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಜೋಡಿ ಸಾಮೂಹಿಕ ವಿವಾಹ ಆಯೋಜಿಸಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ಧೇಶದಿಂದ ಪ್ರತಿ ಜೋಡಿಗೆ ಎಂಟು ಗ್ರಾಮ ಬಂಗಾರ, ವಧುವಿನ ಖಾತೆಗೆ ಹತ್ತು ಸಾವಿರ ಮತ್ತು ವರನಿಗೆ ಐದು ಸಾವಿರ ರೂಪಾಯಿ ನೀಡವುದು ಸೇರಿದಂತೆ ಒಂದು ಜೋಡಿಗೆ ೫೫ ಸಾವಿರ ರೂಪಾಯಿ ವೆಚ್ಚವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ.

ಮಾ.7 ರಂದು ವಿಚಾರಸಂಕಿರಣ: ಮಾರ್ಚ್ 7 ರಂದು ಸಪ್ತಪದಿ ಸಾಮೂಹಿಕ ವಿವಾಹ ಕುರಿತು ವಿಚಾರಸಂಕಿರಣ ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಏಪ್ರಿಲ್ 26 ರಂದು ನಡೆಯುವ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಾಯಿಸಲು ಮಾರ್ಚ್ 27 ಹಾಗೂ ಮೇ 24 ರಂದು ನಡೆಯುವ ವಿವಾಹಕ್ಕ ಒಂದು ತಿಂಗಳು ಮುಂಚೆಯೇ ನೋಂದಾಯಿಸಬಹುದು.

‘ಎ’ ಶ್ರೇಣಿಯ ನೂರು ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಆಯೋಜಿಸಲು ಸರ್ಕಾರ ನಿರ್ಧರಿಸಿತ್ತು. ‘ಎ’ ದರ್ಜೆಯ ದೇವಸ್ಥಾನಗಳಿಲ್ಲದ ಜಿಲ್ಲೆಗಳಲ್ಲಿ ‘ಬಿ’ ಶ್ರೇಣಿಯ ದೇವಸ್ಥಾನಗಳಲ್ಲಿ ವಿವಾಹ ಸುತ್ತೋಲೆ ಹೊರಡಿಸಲಾಗಿದೆ. ಕೆಲ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇರುವ ಪ್ರಮುಖ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲು ಅನುಮತಿ ನೀಡಲು ಮನವಿ ಸಲ್ಲಿಸಿದ್ದಾರೆ.

ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಪ್ತಪದಿ: ಬೆಳಗಾವಿ ನಗರದಲ್ಲಿ ಸಂಘ-ಸಂಸ್ಥೆಗಳು ಪ್ರತಿವರ್ಷ ಸಾಮೂಹಿಕ ವಿವಾಹ ಆಯೋಜಿಸುತ್ತಿವೆ. ಅವರ ಸಹಯೋಗದೊಂದಿಗೆ ಸರ್ಕಾರದ ವತಿಯಿಂದ ಪ್ರತಿವರ್ಷ ಒಂದು ಕಡೆ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸಬಹುದು ಎಂದು ಶಾಸಕ ಅನಿಲ್ ಬೆನಕೆ ತಿಳಿಸಿದರು.

ಶುಚಿತ್ವ ಕಾಪಾಡಲು ಸೂಚನೆ: ಕರ್ನಾಟಕ ವಿಧಾನಪರಿಷತ್ತಿನ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಲಕ್ಷಾಂತರ ಜನ ಸೇರುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದರು.

ಶಾಸಕರಾದ ಅನಿಲ್ ಬೆನಕೆ, ದುರ್ಯೋಧನ ಐಹೊಳೆ ಉಪಸ್ಥಿತರಿದ್ದರು. ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ರವೀಂದ್ರ ಕರಲಿಂಗಣ್ಣವರ, ಸವದತ್ತಿ ಎಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

.

 

ಫ್ರೆಶ್ ನ್ಯೂಸ್

Latest Posts

Featured Videos