ಬೆಂಗಳೂರು: ಮನುಷ್ಯ ಹಾಗೂ ಅವನ ಜೀವನ ಪದ್ಧತಿ ಪ್ರಕೃತಿಯ ಜೊತೆ ಬೆಸೆದುಕೊಂಡಿದೆ. ನಾವೆಲ್ಲರೂ ಪರಿಸರದ ಒಂದು ಭಾಗವಷ್ಟೇ. ಶುದ್ದ ಗಾಳಿ, ನೀರು, ಪರಿಸರ ನಿರ್ಮಾಣ ನಮ್ಮೆಲ್ಲರ ಅತಿದೊಡ್ಡ ಜವಾಬ್ದಾರಿ. ಪರಿಸರ ಉಳಿಸುವ ಅರಿವು ಯುವ ಜನಾಂಗಕ್ಕೆ ಬರಬೇಕು. ಪರಿಸರ ನಮ್ಮ ಮನೆ ಅದನ್ನು ನಾಶ ಮಾಡದೇ ಇರುವಂತೆ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಇಂದು (ಮಂಗಳವಾರ ಜೂ. 17) ರಂದು ಹಮ್ಮಿಕೊಂಡಿದ್ದ ಮ್ಯಾರಥಾನ್ ಗೆ ವಿಧಾನಸೌಧದ ಎದುರು ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿ ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ತಿಳಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಪ್ರಕ್ರಿಯೆಯಲ್ಲಿ ಇದ್ದಾರೆ. 2 ದಿನದ ಹಿಂದೆ ದೆಹಲಿ, ಅಹಮದಾಬಾದ್ ನಲ್ಲಿ ಇದ್ದೆ ಅಲ್ಲಿನ ಉಷ್ಣಾಂಶ ಹತ್ತಿರತ್ತಿರ 49 ಡಿಗ್ರಿಯಿತ್ತು. ಬೆಂಗಳೂರಲ್ಲಿ 22- 23 ಇದೆ. ಈ ವಾತಾವರಣ ನಮ್ಮ ಕರ್ನಾಟಕದ, ಬೆಂಗಳೂರಿನ ಆಸ್ತಿ ಎಂದು ತಿಳಿಸಿದರು.
ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಈ ಜಾಗೃತಿ ಕ್ಲಬ್ ಗಳನ್ನು ರಚನೆ ಮಾಡಬೇಕು. ಪ್ರಕೃತಿ ಉಳಿಸುವ ದೊಡ್ಡ ಹೋರಾಟದ ಹಾಗೂ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು ಎಂದು ಈ ಆದೇಶ ಮಾಡಲಾಗಿದೆ. ಒಂದೊಂದು ಶಾಲೆ ಮರ ಬೆಳೆಸಲು ಆಯಾಯ ಪ್ರದೇಶಗಳನ್ನು ದತ್ತು ಪಡೆಯಬೇಕು ಎಂದು ತಿಳಿಸಿದರು.
ಹಸಿರು ಮತ್ತು ಸ್ವಚ್ಚತೆ ಇದೇ ನಮ್ಮ ಸರ್ಕಾರದ ಧ್ಯೇಯ. ಇದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ಸರ್ಕಾರದ ಕರ್ತವ್ಯ. ಕರ್ನಾಟಕದ ದೊಡ್ಡ ಆಸ್ತಿಯೇ ನಮ್ಮ ಪ್ರಕೃತಿ. ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ, ಜವಾಬ್ದಾರಿಯಾಗಬೇಕು ಎಂದರು. ಇದನ್ನೂ ಓದಿ: ಯಾರು ಹೆಚ್ಚು ಬಲವುಳ್ಳವರೋ ಅವರಿಗೆ ಶತ್ರುಗಳು ಜಾಸ್ತಿ: ಡಿಸಿಎಂ ಡಿ.ಕೆ.ಶಿ
ಸುಮಾರು 5 ಸಾವಿರಕ್ಕೂ ಹೆಚ್ಚು ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ವಿಧಾನಸೌಧದ ಸುತ್ತಲೂ ನಡಿಗೆ ಮಾಡಿ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ನಾನು ಸಹ ಶಾಲಾ ದಿನಗಳಲ್ಲಿ ಇದರ ಭಾಗವಾಗಿದ್ದವನು. ಈ ಸಂಘಟನೆ ಬೆಳೆಸುವುದು ನಮ್ಮ ಬದ್ಧತೆ. ಪರಿಸರ ದಿನಾಚರಣೆ ಮಾಡುವುದು ನಮಗಾಗಿ ಅಲ್ಲ ಮುಂದಿನ ಪೀಳಿಗೆಗಾಗಿ ಎಂದರು.
ಹಸಿರು ಉಳಿಸಿ, ಮರ ಬೆಳೆಸಿ. ಕಸ ತ್ಯಜಿಸಿ ಮರ ಬೆಳೆಸಿ ಎಂದು ವಿದ್ಯಾರ್ಥಿಗಳೊಟ್ಟಿಗೆ ಡಿಸಿಎಂ ಘೋಷಣೆ ಕೂಗಿದರು.