ಬಿಸಿಲನಾಡಲ್ಲಿ ಕೈ ಬೀಸಿ ಕರೆಯುತ್ತಿರುವ ಜಲಪಾತ

ಬಿಸಿಲನಾಡಲ್ಲಿ ಕೈ ಬೀಸಿ ಕರೆಯುತ್ತಿರುವ ಜಲಪಾತ

 ರಾಯಚೂರು, ಜ. 14: ಲಿಂಗಸ್ಗೂರು ತಾಲೂಕಿನ ಗುಂಡಲಬಂಡೆ ಜಲಪಾತ ಎತ್ತರದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುವುದೇ ಒಂದು ಚಂದ, ಪ್ರವಾಸಿಗರು ದಿನದಿಂದ ದಿನಕ್ಕೆ ಹೆಚ್ಚುತಿರುವ ಕಾರಣ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಈ ಸ್ಥಳವನ್ನು ಅಭಿವೃದ್ಧಿ ಮಾಡಬೇಕಾಗಿ.

ಬಿಸಿಲನಾಡು ರಾಯಚೂರಿನಲ್ಲಿ ಮಲೆನಾಡು ನೆನಪಿಸುವಂತೆ ಜಲಪಾತವೊಂದು ಧುಮ್ಮಿಕ್ಕಿ ಹರಿಯುತ್ತಿದೆ. ಹೊಸ ವರ್ಷದ ಹಿನ್ನೆಲೆ ಮೈದುಂಬಿ ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ. ಕಲ್ಲು ಬಂಡೆಗಳ ಮೈಮೇಲೆ ಮೆಲ್ಲನೆ ಹರಿದು ರಮಣೀಯ ದೃಶ್ಯಕಾವ್ಯ ಸೃಷ್ಠಿಸಿರುವ ಗುಂಡಲಬಂಡೆ ಜಲಪಾತದ ಸೋಬಗನ್ನ ನೋಡಲು ಜನ ಕಾತುರದಿಂದ ಹೋಗುತ್ತಿದ್ದಾರೆ. ಆದರೆ ಜಲಪಾತಕ್ಕೆ ಹೋಗಲು ದಾರಿಯಿಲ್ಲದೆ ಬಹಳಷ್ಟು ಪ್ರವಾಸಿಗರು ನಿರಾಸೆಗೊಂಡಿದ್ದಾರೆ. ಸಾಹಸಿಗರು ನಡೆದುಕೊಂಡೆ ಜಲಪಾತದ ಹತ್ತಿರ ಹೋಗುತ್ತಿದ್ದಾರೆ.

ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿಯಿರುವ ಈ ಜಲಪಾತವನ್ನು ಸಿಡಿಲುಬಂಡೆ ಜಲಪಾತ ಅಂತಲೂ ಕರೆಯುತ್ತಾರೆ. ಹನ್ನೆರಡು ವರ್ಷಗಳಿಂದ ಬೆಳಕಿಗೆ ಬಂದಿರುವ ಈ ಜಲಪಾತ ಮೊದಲು ಸಣ್ಣದಾಗಿ ಹರಿಯುತ್ತಿತ್ತು. ನಾರಾಯಣಪುರ ಬಲದಂಡೆ ಕಾಲುವೆಯ ಬಸಿನೀರು ಸೇರಿಕೊಂಡು ಈಗ ಜಲಪಾತ 90 ಅಡಿ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಇಲ್ಲಿಂದ 10 ಕಿ.ಮೀ ದೂರದಲ್ಲಿ ಐದಾರು ಹಳ್ಳಗಳು ಒಂದೆಡೆ ಸೇರುವ ಸ್ಥಳದಿಂದ ಉಗಮವಾಗುವ ಜಲಪಾತದ ಮೂಲ ಪುನಃ ಹಳ್ಳಗಳ ಮೂಲಕ ಹರಿದು ಕೃಷ್ಣಾನದಿಗೆ ಸೇರುತ್ತಿದೆ. ಆದರೆ ಇಲ್ಲೊಂದು ಸುಂದರ ಜಲಪಾತವಿದೆ ಅಂತ ಜಿಲ್ಲೆಯ ಎಷ್ಟೋ ಜನರಿಗೆ ಈಗಲೂ ಗೊತ್ತೇ ಇಲ್ಲ. ಕಾರಣ ಇಲ್ಲಿಗೆ ತೆರಳಲು ರಸ್ತೆಯಿಲ್ಲ, ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಅಭಿವೃದ್ಧಿ ಮಾಡುವ ಮನಸ್ಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಜಲಪಾತದ ಇರುವುದು ಇನ್ನೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೆ ಬಂದಿಲ್ಲ. ಬಂದರೂ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿಲ್ಲ. ಕಾಡಿನ ಮಧ್ಯೆ ದುರ್ಗಮ ರಸ್ತೆಯಲ್ಲಿ ತೆರಳಿದರೆ ಸಿಗುವ ಜಲಪಾತದ ಬಳಿ ಹೋಗುವುದೇ ಒಂದು ಸಾಹಸವಾಗಿರುವುದರಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ. ಜಿಲ್ಲೆಯ ಏಕೈಕ ರಮಣೀಯ ಪ್ರವಾಸಿ ಸ್ಥಳವಾಗಿರುವ ಗುಂಡಲಬಂಡೆ ಜಲಪಾತ ಪ್ರದೇಶದ ಅಭಿವೃದ್ಧಿ ಅವಶ್ಯವಾಗಿದೆ. ಅಲ್ಲದೆ ಎತ್ತರದಿಂದ ನೀರು ಧುಮ್ಮುಕ್ಕುವುದರಿಂದ ವಿದ್ಯುತ್ ಉತ್ಪಾದನೆಗೂ ಅವಕಾಶಗಳಿವೆ. ಜಿಲ್ಲೆಯ ಶಾಸಕರು, ಸಂಸದರು ಪ್ರಸ್ತಾವನೆ ಸಲ್ಲಿಸಿದರೆ ಜಲಪಾತ ಅಭಿವೃದ್ಧಿಗೆ ಮುಂದಾಗುತ್ತೇವೆ ಅಂತ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಕೊರತೆಯಿಂದ ಸುಂದರ ತಾಣವೊಂದು ಜನರಿಂದ ದೂರ ಉಳಿದಿದೆ ಅಂತ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.ಇಲ್ಲಿಗೆ ಹರಿದು ಹೊಸ ವರ್ಷಾಚರಣೆ, ರಜಾದಿನಗಳು ಬಂದ್ರೆ ಮೋಜುಮಸ್ತಿಗಾಗಿ ಯುವಕರ ದಂಡೇಬರುತ್ತದೆ. ಆದರೆ ಇಲ್ಲಿ ಯಾವುದೇ ಸುರಕ್ಷತೆಗಳು ಇಲ್ಲದಿರುವುದರಿಂದ ಯುವಕರು ಅಪಾಯಕ್ಕೆ ಒಳಗಾದ ಉದಾಹರಣೆಗಳೂ ಇವೆ. ಕನಿಷ್ಠ ಈಗಲಾದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜಲಪಾತ ಪ್ರದೇಶ ಅಭಿವೃದ್ಧಿಗೆ ಮುಂದಾಗಬೇಕಿದೆ. ಜಿಲ್ಲೆಯ ಏಕೈಕ ಸುಂದರ ಪ್ರವಾಸಿ ಸ್ಥಳವನ್ನ ಅಭಿವೃದ್ಧಿ ಪಡಿಸಬೇಕಿದೆ.

ಜಿಲ್ಲೆಯ ಜನ ಪ್ರತಿನಿಧಿಗಳು ಗುಂಡಲಬಂಡೆ ಜಲಪಾತವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸುವುದು ಹಾಗೂ ಈ ಸ್ಥಳದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರ ಸಹ ಪ್ರಾರಂಭಕ್ಕೂ ಮುಂದಗುಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos