ಜನಪ್ರತಿನಿಧಿಗಳಿಗೆ ಮತದಾರರ ಹಿತ ಮುಖ್ಯ, ಟೀಕೆಯಲ್ಲ

ಜನಪ್ರತಿನಿಧಿಗಳಿಗೆ ಮತದಾರರ ಹಿತ ಮುಖ್ಯ, ಟೀಕೆಯಲ್ಲ

ಕುಣಿಗಲ್ : ಜನಪ್ರತಿನಿಧಿಗಳಿಗೆ ಮತದಾರರ ಹಿತ ಮುಖ್ಯವೇ ಹೊರತು ವಿರೋಧ ಪಕ್ಷಗಳ ಟೀಕೆಗಳಲ್ಲ. ಮೂಲ ಸೌಕರ್ಯ ಕಲ್ಪಿಸಿ ಋಣ ತೀರಿಸುವ ಕಾರ್ಯ ಮುಖ್ಯವಾಗಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಕೆಂಪನಹಳ್ಳಿಯಲ್ಲಿ 7 ಕೋಟಿ ವೆಚ್ಚದ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ಆಳ್ವಿಕೆಗೊಳಪಟ್ಟಿದ್ದ ಹುತ್ರಿದುರ್ಗ ಬೆಟ್ಟವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲು ಕಳೆದ 25 ವರ್ಷಗಳಿಂದ ತಾಲ್ಲೂಕನ್ನು ಪ್ರತಿನಿಧಿಸಿದವರು ಗಮನಹರಿಸಿಲ್ಲ. ತಾವು ಸಂಸದರಾದ ಮೇಲೆ 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದರು.

ಶ್ರೀರಂಗ ಏತ ನೀರಾವರಿ ಯೋಜನೆಯಿಂದ ಹುತ್ರಿದುರ್ಗ ಹೋಬಳಿಯ 19 ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ. ಮಾರ್ಕೋನ ಹಳ್ಳಿ ಜಲಾಶಯಕ್ಕೆ ನೀರು ನಿಗದಿಪಡಿಸಿ ನಂತರ ನೀರು ತೆಗೆದುಕೊಂಡು ಹೋಗಲು ತಾಲ್ಲೂಕಿನ ಜನಪ್ರತಿನಿಧಿಯಾಗಿ ಹೋರಾಡಿದೆ. ಇದರ ಪರಿಣಾಮ ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ನಿರ್ಣಯವಾಗಿ ಮಾರ್ಕೋನಹಳ್ಳಿ ಜಲಾಶಯಕ್ಕೆ ಒಂದು ಟಿಎಂಸಿ ನೀರು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ, ಮಾರ್ಕೋನಹಳ್ಳಿ ನೀರಿನ ವಿಚಾರದಲ್ಲಿ ಅನ್ಯಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಡಾ.ರಂಗನಾಥ್, ಹುತ್ರಿದುರ್ಗ ಹೋಬಳಿಯ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ 75 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಸಚಿವ ನಾರಾಯಣಗೌಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಕೋಘಟ್ಟ ರಾಜಣ್ಣ, ಬೇಗೂರು ನಾರಾಯಣ, ಐ.ಜಿ. ವಿಶ್ವನಾಥ್, ಹಾಲುವಾಗಿಲು ಸ್ವಾಮಿ, ಬೋರೆಗೌಡ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos