ಫಲಪುಷ್ಪ ಪ್ರದರ್ಶನದಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣ

ಫಲಪುಷ್ಪ ಪ್ರದರ್ಶನದಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣ

ಬೆಂಗಳೂರು, ಜ. 14: ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಜ.17 ರಿಂದ 27 ದಿನಗಳ ವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ಯಾಕುಮಾರಿಯಲ್ಲಿರುವ ಸ್ಮಾರಕ ಶಿಲಾ ಬಂಡೆಯ ಮೇಲೆ ನಿಂತಿರುವ ವಿವೇಕಾನಂದರ ಪುಷ್ಪ ಪ್ರತಿಮೆಯ ದೃಶ್ಯವನ್ನು ಲಾಲ್ ಬಾಗ್‌ನ ಗಾಜಿನ ಮನೆಯಲ್ಲಿ ಪ್ರದರ್ಶಿಸಲಾಗುವುದು.

ಜ.17 ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ 211ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಇದು ರಾಷ್ಟ್ರ ಮಟ್ಟದಲ್ಲಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ ಜ್ಞಾನ ಕೇಂದ್ರ ಪ್ರತಿಕೃತಿ ಕೂಡ ನಿರ್ಮಾಣವಾಗುತ್ತಿದ್ದು, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಅವರ ಆದರ್ಶವನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ವಿವರಿಸಿದರು. ಅಮೆರಿಕಾದ ಚಿಕಾಗೋದಲ್ಲಿ 1892 ರಲ್ಲಿ ವಿಶ್ವ ಧರ್ಮ ಸಂಸತ್‌ನಲ್ಲಿ ವಿವೇಕಾನಂದರ ಭಾಷಣದ ವೇದಿಕೆ, ಭಾಷಣವನ್ನು ಆಲಿಸಲು ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಧರ್ಮ ಗುರುಗಳು ಭಾಗಿಯಾಗಿರುವುದನ್ನು ಫಲಪುಷ್ಪಗಳ ಮೂಲಕ ಸಿದ್ಧಪಡಿಸಲಾಗಿದೆ.

98ಕ್ಕೂ ಹೆಚ್ಚು ಬಗೆಯ ವೈವಿದ್ಯಮಯ ವಾರ್ಷಿಕ ಹೂಗಳಿಂದ ಕೂಡಿದ ಈ ಪ್ರದರ್ಶನದಲ್ಲಿ ವಿಶೇಷವಾಗಿ 10 ದೇಶಗಳ, 37 ಬಗೆಯ ವಿಶೇಷ ಹೂಗಳು,ಶೀತವಲಯದ ಹೂಗಳು, ಹಾಗೂ ಹೂ ಬಿಡುವ ವಿವಿಧ ವರ್ಣಗಳ ಪಾಯಿನ್ ಸಿಟಿಯಾ, ಗ್ಲಾಕ್ಸಿನಿಯಾ, ಸೇವಂತಿಗೆ, ಡಾರ್ಕ್ ಇಕ್ಸೋರಾ, ಪೆರಿನಿಯಲ್ ಸನ್ ಫ್ಲವರ್, ಆಂಥೋರಿಯಂ, ಸಿಂಬಿಡಿಯಂ ಆಕ್ಸಿಡ್, ಡೇಲಿಯಾ, ದಾಸವಾಳ  ಸೇರಿದಂತೆ ನಾನಾ ಬಗೆಯ ಹೂಗಳನ್ನು ಪ್ರದರ್ಶಿಸಲಾಗುತ್ತದೆ.

ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಜಂಟಿ ಸಹಭಾಗಿತ್ವದೊಂದಿಗೆ ಲಾಲ್ ಬಾಗ್‌ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಸಂಪೂರ್ಣ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಸಂಪೂರ್ಣ ಇತಿಹಾಸ ಹಿಂದೂ ಧರ್ಮದ ಪ್ರಚಾರವನ್ನು ಫಲಪುಷ್ಪ ಪ್ರದರ್ಶನದ ಮೂಲಕ ಅನಾವರಣಗೊಳಿಸಲಾಗುತ್ತಿದೆ.

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 1.9 ಕೋಟಿ ರೂ. ವೆಚ್ಚಮಾಡಲಾಗುತ್ತಿದ್ದು, ಊಟಿ, ಡಾರ್ಜಿಲಿಂಗ್ ಮತ್ತು ಕೇರಳ ರಾಜ್ಯಗಳಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಗುಲಾಬಿ ಹೂವುಗಳನ್ನು ತರಿಸಿಕೊಳ್ಳಲಾಗಿದೆ. ಸ್ವಾಮಿ ವಿವೇಕಾನಂದರ ಉಲ್ಲೇಖಿಸಿರುವ ನೀತಿ ಕಥೆಗಳ ದೃಶ್ಯ, ಪ್ರಾತ್ಯಕ್ಷಿಕೆ, ವಿವೇಕಾನಂದರ ಘೋಷಣೆ, ಸೂಕ್ತಿಗಳು, ವಿವೇಕಾ ವೃಕ್ಷ, ಪಂಚವಟಿಯಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರು ಶಿಷ್ಯಂದಿರಿಗೆ ಉಪದೇಶ ಮಾಡುತ್ತಿದ್ದ ಸನ್ನಿವೇಶವನ್ನು ಹೂಗಳ ಮೂಲಕ ಮರು ಸೃಷ್ಟಿಸಲಾಗಿದೆ.

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ನಲವತ್ತು ಸಾವಿರ ಜಾತಿಯ ಹೂವುಗಳನ್ನು ಬಳಕೆ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ 70 ರೂ. ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 20 ರೂ.ಗಳನ್ನು ನಿಗದಿಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ ನಿರ್ಮಾಣದಲ್ಲಿ ಈ ಬಾರಿ ಗಾಜಿನ ಮನೆಯಲ್ಲಿ 475 ಮಂದಿ ಕಾರ್ಯ ನಿರ್ವಹಿಸಿದ್ದಾರೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಜ.16 ರಂದು ಡಾ.ಎಚ್.ಎಂ ಮರೀಗೌಡ ಸ್ಮಾರಕ ಭವನದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನದ ಅಂಗವಾಗಿ 1ನೇ ತರಗತಿಯಿಂದ 10ನೇ ತರಗತಿ ವರೆಗೆ 1300 ಮಕ್ಕಳಿಗೆ ಮಾಧ್ಯಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.


ಫ್ರೆಶ್ ನ್ಯೂಸ್

Latest Posts

Featured Videos