ಅಕ್ರಮ ಮದ್ಯ ಮಾರಾಟ ತಡೆಗೆ ಗ್ರಾಮಸ್ಥರ ಆಗ್ರಹ

ಅಕ್ರಮ ಮದ್ಯ ಮಾರಾಟ ತಡೆಗೆ ಗ್ರಾಮಸ್ಥರ ಆಗ್ರಹ

ಬೇಲೂರು, ಡಿ. 06: ದೇವರ ಹೆಸರಿನಲ್ಲಿ ಮಾಟ ಮಂತ್ರ, ಮದ್ಯದ ಹಾವಳಿಯಿಂದ ಬೇಸತ್ತ ತಾಲೂಕಿನ ಚಂದನಹಳ್ಳಿ ಗ್ರಾಮಸ್ಥರು ಕ್ರಮಕ್ಕೆ ಆಗ್ರಹಿಸಿ ಅಬಕಾರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾಂತರಾಜು, ಗ್ರಾಮದಲ್ಲಿ ಅಕ್ರಮ ಮದ್ಯದ ವ್ಯಾಪಾರ ಹಾಗೂ ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರವನ್ನು ನಿಲ್ಲಿಸುವಂತೆ ಆಗ್ರಹಿಸಿ ಈ ಹಿಂದೆ ಹಲವು ಬಾರಿ ಪತ್ರ ನೀಡಿದ್ದೇವು. ಪೊಲೀಸರಿಗೂ ತಿಳಿಸಿದ್ದೆವು. ಆದರೂ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಹತ್ತಾರು ಅಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.

ಸಂಜೆ ಆಗುತ್ತಲೆ ದೇಗುಲದ ಆವರಣ, ಶಾಲೆಯ ಬಳಿ ಮದ್ಯ ಕುಡಿದು ಬಾಟಲಿ, ಪ್ಯಾಕೇಟ್ ಎಸೆಯುವುದು ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗಿದೆ. ಸುತ್ತಮುತ್ತಲಿನಲ್ಲಿರುವ ವಾಸದ ಮನೆಗಳ ನಿವಾಸಿಗಳು ನೆಮ್ಮದಿ ಜೀವನ ನಡೆಸುವುದೆ ಕಷ್ಟ ಎನ್ನುವಷ್ಟು ಕೆಟ್ಟ ಪದಗಳನ್ನು ಕುಡಿದ ಅಮಲಿನಲ್ಲಿ ಕುಡುಕರು ಮಾತನಾಡುತ್ತಾರೆ. ಒಳ್ಳೆಯ ಮಾತು ಹೇಳಿದರೂ ಕೇಳುವಷ್ಟು ತಾಳ್ಮೆ ಇವರಿಗಿಲ್ಲ. ಬುದ್ದಿ ಹೇಳಿದವರ ಮೇಲೆ ಜಗಳಕ್ಕೆ ಬರುತ್ತಾರೆ ಎಂದು ಆರೋಪಿಸಿದರು.

ಪ್ರದೀಪ್ ಮಾತನಾಡಿ, ಗ್ರಾಮದೇವತೆಯಾದ ಚಂದನಹಳ್ಳಿ ಅಮ್ಮನವರಿಗೆ ಅಪಾರ ಭಕ್ತವೃಂದವಿದೆ. ಇದನ್ನೆ ನೆಪ ಮಾಡಿಕೊಂಡಿರುವ ಕೆಲವರು ಕುಡಿದು ದೇವರ ಹೆಸರಿನಲ್ಲಿ ದೇವರು ಬಂತೆಂದು ಕುಣಿಯುವುದು, ತಗಡು, ನಿಂಬೆಹಣ್ಣು ತರಿಸಿ ಮಾಟ ಮಂತ್ರ ಮಾಡಿಕೊಡುವುದು, ಇದಕ್ಕಾಗಿ ಸಾವಿರಾರು ರೂ. ವಸೂಲಿ ಮಾಡುವುದು ನಡೆಯುತ್ತಿದೆ. ಹೊರಗಿನಿಂದಲೂ ಕೆಲವರನ್ನು ಕರೆಸಿ ದೇವರು ಬಂದವರಂತೆ ಕುಣಿಸುವುದು ಕಂಡುಬರುತ್ತಿದೆ. ಇದಕ್ಕಾಗೆ ಕೆಲವರು ಇಲ್ಲಿ ಇದ್ದಾರೆ ಇದರಿಂದ ದೇವರಿಗೆ ಕೆಟ್ಟ ಹೆಸರು ಬರುವಂತಾಗಿದೆ. ನಿಜವಾದ ಭಕ್ತರಿಗೆ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈಗಾಗಲೆ ಅರೇಹಳ್ಳಿ ಪೊಲೀಸರಿಗೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಇದು ನಮಗೆ ನೋವು ತಂದಿದೆ. ಈಗಲಾದರೂ ಕ್ರಮ ಕೈಗೊಳ್ಳಬೇಕಿದೆ, ಇಲ್ಲದಿದ್ದಲ್ಲಿ ಹಾಸನದ ಡಿಸಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos