ಉದ್ಯೋಗ ಕಳೆದುಕೊಂಡವರಿಗೆ ಉನ್ನತಿ ಯೋಜನೆ

ಉದ್ಯೋಗ ಕಳೆದುಕೊಂಡವರಿಗೆ ಉನ್ನತಿ ಯೋಜನೆ

ಕೋಲಾರ: ಕೋವಿಡ್ ಕಾರಣದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದು, ಅಂತವರಿಗೆ ಸ್ವಯಂ ಉದ್ಯೋಗದ ಮೂಲಕ ಜೀವನ ರೂಪಿಸುವ ಸಲುವಾಗಿ ಉನ್ನತಿ ಎಂಬ ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ನ ಉಪ ನಿರ್ದೇಶಕ ಏಕನಾಥಸ್ವಾಮಿ ಹೇಳಿದರು.
ನಗರ ಹೊರ ವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ಯಂತ್ರ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಉನ್ನತಿಯೋಜನೆ ಮೂಲಕ ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವವರಿಗೆ, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಸದಸ್ಯರಿಗೆ ಹಾಗೂ ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಕುಟುಂಬದವರಿಗೆ ಸ್ವಉದ್ಯೋಗಧಾರಿತ ತರಬೇತಿಗಳನ್ನು ನೀಡಿ, ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದು ತಿಳಿಸಿದರು.
ಟೈಲರಿಂಗ್ ವೃತ್ತಿಯು ಮಹಿಳೆಯರ ಸ್ವಾವಲಂಭಿಜೀವನಕ್ಕೆ ಪೂರಕವಾಗಿದೆ. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಗೌರವ ಇರುತ್ತದೆ, ಯಾವ ವೃತ್ತಿಯನ್ನು ಕಡೆಗಣಿಸುವಂತಿಲ್ಲ. ನಾವು ಕೈಗೊಳ್ಳುವ ವೃತ್ತಿಯ ಬಗ್ಗೆ ನಮಗೆ ಹೆಮ್ಮೆಇರಬೇಕು ಎಂದು ಹೇಳಿದರು.
ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ನ ಯೋಜನಾ ವ್ಯವಸ್ಥಾಪಕಿ ಸುನಂದ ಮಾತನಾಡಿ, ಸ್ವಉದ್ಯೋಗದಲ್ಲಿ ಆಸಕ್ತಿ ಇರುವ ಮಹಿಳೆಯರಿಗಾಗಿ ಹಲವು ಇಲಾಖೆಗಳು ಸಾಕಷ್ಟು ಅನುದಾನವನ್ನು ಮೀಸಲಿಟ್ಟಿದೆ ಎಂದರು.
ಸರಕಾರದ ಯೋಜನೆಗಳ ಬಗ್ಗೆ ಅರಿವನ್ನುಹೊಂದುವ ಮನಸ್ಥಿತಿಯನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಇದರಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಕಾಂತ್ ಮಾತನಾಡಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಕಾರ್ಮಿಕರುಇಲಾಖೆಯಿಂದ ನೀಡುವ ಕಾರ್ಮಿಕ ಕಾರ್ಡ್ನ್ನು ಪಡೆದುಕೊಂಡರೆ ವೈದ್ಯಕೀಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ, ಮದುವೆಗೆ ಸಹಾಯಧನ, ಅಂಗವಿಕಲರಾದರೆ ಪರಿಹಾರಧನ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಅಸಂಘಟಿತ ಕಾರ್ಮಿಕರು ಪಡೆಯಲು ಸಾಧ್ಯ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos