ಯಾರು ಹೆಚ್ಚು ಬಲವುಳ್ಳವರೋ ಅವರಿಗೆ ಶತ್ರುಗಳು ಜಾಸ್ತಿ: ಡಿಸಿಎಂ ಡಿ.ಕೆ.ಶಿ

ಯಾರು ಹೆಚ್ಚು ಬಲವುಳ್ಳವರೋ ಅವರಿಗೆ ಶತ್ರುಗಳು ಜಾಸ್ತಿ: ಡಿಸಿಎಂ ಡಿ.ಕೆ.ಶಿ

ಬೆಂಗಳೂರು: ದೇಶದಲ್ಲಿ ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಕಾಲ್ತುಳಿತಕ್ಕೆ ಒಳಗಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ ಆದರೆ ನಾವು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿಲ್ಲ. ಆದರೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಇದು ಯಾವ ಮಟ್ಟಿಗೆ ಸರಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಮಾಲಿನ್ಯ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಇಂದು (ಮಂಗಳವಾರ ಜೂ. 17) ರಂದು ಹಮ್ಮಿಕೊಂಡಿದ್ದ ಮ್ಯಾರಥಾನ್ ಗೆ ವಿಧಾನಸೌಧದ ಎದುರು ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಅನೇಕ ರೈಲ್ವೇ ನಿಲ್ದಾಣಗಳಲ್ಲಿ ಕಾಲ್ತುಳಿತ, ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನೂರಾರು ಜನ ಕಾಲ್ತುಳಿತಕ್ಕೆ ಒಳಗಾಗಿ ಸತ್ತರು. ಇದಕ್ಕೆಲ್ಲಾ ಯಾರು ಹೊಣೆ? 2 ದಿನದ ಹಿಂದೆ ನಾನು ಅಹಮದಾಬಾದ್ ಗೆ ಹೋಗಿದ್ದೆ. ನಾನೇನಾದರು ಆ ಘಟನೆ ಬಗ್ಗೆ ಕೇಂದ್ರ ಸರ್ಕಾರವನ್ನು ಗುರಿ ಮಾಡಿ ಮಾತನಾಡಿದ್ದೇನೆಯೇ?” ಎಂದು ಖಡಕ್ಕಾಗಿ ಉತ್ತರಿಸಿದರು.

ಬಿಜೆಪಿಯವರು ಇರುವುದೇ ಹೆಣದ ಮೇಲೆ ರಾಜಕೀಯ ಮಾಡಲು. ಅವರು ಎಲ್ಲಾ ಕಾಲದಿಂದಲೂ ಅದೇ ಕೆಲಸ ಮಾಡುತ್ತಿದ್ದಾರೆ. ಬಂದ್ ವೇಳೆಯಲ್ಲಿ, ಗಂಗಾಧರ್ ಕೊಲೆ ಪ್ರಕರಣ ಸೇರಿದಂತೆ ಬೇಕಾದಷ್ಟು ಸಮಯದಲ್ಲಿ ಇದೇ ರೀತಿ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಲ್ತುಳಿತ ಪ್ರಕರಣದಲ್ಲಿ ಯಾರ್ಯಾರಿಗೆ ಶಿಕ್ಷೆ ಕೊಡಬೇಕೋ ಆ ಕೆಲಸವನ್ನು ಸರ್ಕಾರ ಮಾಡಿದೆ. ತನಿಖೆಗಾಗಿ ಏಕ ಸದಸ್ಯ ಆಯೋಗವನ್ನು ಸಹ ನೇಮಕ ಮಾಡಲಾಗಿದೆ. ಇಡೀ ದೇಶದಲ್ಲಿ ನೂರಾರು ಘಟನೆಗಳು ನಡೆದಿವೆ. ಆದರೂ ಕಾಂಗ್ರೆಸ್ ಪಕ್ಷ ಎಂದಿಗೂ ಹೆಣದ ಮೇಲೆ ರಾಜಕೀಯ ಮಾಡಿಲ್ಲ ಎಂದು ಹೇಳಿದರು.

ಯಾರು ಹೆಚ್ಚು ಬಲವುಳ್ಳವರೋ ಅವರಿಗೆ ಶತ್ರುಗಳು ಜಾಸ್ತಿ. ಕಡಿಮೆ ಬಲ ಇದ್ದರೆ ಕಡಿಮೆ ಶತ್ರುಗಳು, ಬಲವೇ ಇಲ್ಲದಿದ್ದರೇ ಶತ್ರುಗಳೇ ಇಲ್ಲ. ಅವರಿಗೆ ನಮ್ಮನ್ನು ಕಂಡರೆ ಭಯ. ನೀವು (ಮಾಧ್ಯಮಗಳು) ನಮ್ಮ ಜೊತೆ ಇದ್ದರೆ 2028 ಕ್ಕೆ ಮತ್ತೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos