ಜೀವನೋಪಾಯದ ಜೊತೆಗೆ ಪರೋಪಕಾರ, ಆತ್ಮ ಸಂತೃಪ್ತಿ ಇರಬೇಕು

ಜೀವನೋಪಾಯದ ಜೊತೆಗೆ ಪರೋಪಕಾರ, ಆತ್ಮ ಸಂತೃಪ್ತಿ ಇರಬೇಕು

ಅಥಣಿ, ಫೆ. 20: ಜೀವನೋಪಾಯಕ್ಕೆ ಮಾಡುವುದು ಕಾಯಕವಲ್ಲ. ಜೀವನೋಪಾಯದ ಜೊತೆಗೆ ಪರೋಪಕಾರ, ಆತ್ಮ ಸಂತೃಪ್ತಿ ಇರಬೇಕು ಅದುವೇ ನಿಜವಾದ ಕಾಯಕ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಇಬ್ರಾಹಿಂ ಸುತಾರ ಅಭಿಮತ ವ್ಯಕ್ತಪಡಿಸಿದರು.

ಅಥಣಿಯ ಗಚ್ಚಿನಮಠದಲ್ಲಿ ಕಳೆದ 10 ದಿನಗಳಿಂದ ಜರುಗಿದ ಶರಣ ಸಂಸ್ಕೃತಿ ಕಾರ್ಯಕ್ರಮದ ಅಂಗವಾಗಿ ಶರಣರ ಜೀವನ ದರ್ಶನ ಪ್ರವಚನ ಸಮಾರೋಪ ಜರುಗಿತು .

ಈ ಸಂದರ್ಭದಲ್ಲಿ ಮಾತನಾಡಿದ ಸುತಾರ, ಯಾರು ಜೀವನದಲ್ಲಿ ಶರಣ ತತ್ವದಂತೆ ಕಾಯಕ ಪಾಲಿಸುತ್ತಾರೋ ಅವರು ನಿಜವಾದ ಶರಣ ತತ್ವ ಪಾಲಕರು. ಯಾರು ತಮ್ಮ ಜೀವನದಲ್ಲಿ ತಮ್ಮನ್ನೇ ತಾವು ಅರಿತು ಎಲ್ಲಿಯೂ ಚ್ಯುತಿ ಬರದಂತೆ ಜೀವನದ ಹೆಜ್ಜೆ ಹಾಕುತ್ತಾರೋ ಅವರು ನಿಜವಾದ ಶರಣರು. ಜಗತ್ತಿನ ಎಲ್ಲ ಧರ್ಮದ ಗುರಿ ಒಂದೇ ಏಕದೇವೋಪಾಸನೆ, ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸುವುದು ಅದುವೆ  ಶರಣರ ಸಂದೇಶ ಎಂದು ವಿವರಿಸಿದರು.

ಸಾನಿಧ್ಯ ವಹಿಸಿದ್ದ ನದಿ: ಇಂಗಳಗಾಂವ ಗ್ರಾಮದ ಗುರುಲಿಂಗದೇವರ ಮಠದ ಸಿದ್ದಲಿಂಗ ಸ್ವಾಮಿಗಳು ಮಾತನಾಡಿ, ಅಥಣಿ ಗಚ್ಚಿನ ‘ ಮಠದಲ್ಲಿ ಶತಮಾನಗಳ ಕಾಲ ಮಹಾಶಿವರಾತ್ರಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಲೋಕಕಲ್ಯಾಣ ಕಾರ್ಯಕ್ರಮವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುತ್ತಿರುವ ಕೀರ್ತಿ ಇಂದಿನ ಪಿಠಾಧ್ಯಕ್ಷ ಶಿವಬಸವ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು. ಸದ್ಯ ನಡೆಯುವ ಈ ಸಂಸ್ಕೃತಿ ಉತ್ಸವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಮಾದರಿಯಲ್ಲಿ ಜರುಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗಚ್ಚಿನಮಠಾಧ್ಯಕ್ಷ ಶಿವಬಸವ ಮಹಾಸ್ವಾಮಿಗಳು ಮಾತನಾಡಿ, ಇಬ್ರಾಹಿಂ ಸುತಾರ ಅವರು ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ ಇಡಿ ದೇಶದ ಎಲ್ಲ ಸಮುದಾಯದವರಿಗೆ ಸೇರಿದವರು ಅವರೊಬ್ಬ ವಿಶ್ವ ಮಾನವರಂತೆ  ಅವರ ವಿಚಾರಧಾರೆಗಳು ಪ್ರತಿಯೊಬ್ಬರ ಮನೆ ತಲುಪಬೇಕು ಎಂದು ಹೇಳಿದರು.

ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮತ್ತು ಮರುಳಶಂಕರ ಪೀಠಾಧ್ಯಕ್ಷರಾದ ಸಿದ್ದ ಬಸವ ಕಬೀರ ಸ್ವಾಮಿಗಳು ಮಾತನಾಡಿದರು. ಅತಿಥಿಗಳಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾದ ಚಿದಾನಂದ ಸವದಿ, ಗುತ್ತಿಗೆದಾರ ಧರೆಪ್ಪ ಠಕ್ಕಣ್ಣವರ, ರಾಜೇಶ ಬುರ್ಲಿ, ಪ್ರಭಯ್ಯಾ ಉಮಚಗಿಮಠ, ಮಲ್ಲಿಕಾರ್ಜುನ ಕನಶೆಟ್ಟಿ, ಮಹಾಂತೇಶ ಕವಲಾಪೂರ ಮುಂತಾದವರು ಮಾತನಾಡಿದರು.

ಇದೇ ಸಮಯದಲ್ಲಿ ಕಲರ್ ಕನ್ನಡದ ಕೋಗಿಲೆಗಳಾದ ಕರಿಬಸವ, ತಡಕಲ್, ಶ್ವೇತಾ ದೇವನಹಳ್ಳಿ ಸುಗಮ ಸಂಗೀತ ಜನಮನ ಸೆಳೆಯಿತು. ಸಾಮೂಹಿಕ ನೃತ್ಯವನ್ನು ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ – ಹಲ್ಯಾಳ, ಎಸ್. ಎಮ್. ಎಸ್. ಕಾಲೇಜ ಯುವಕರ ಜಾನಪದ ಕಲಾ ತಂಡ, ಪೂರ್ಣ ಬ್ರಹ್ಮ ಆಂಗ್ಲ ಮಾಧ್ಯಮ ಶಾಲೆ ಕೊಕಟನೂರ, ತುಳಜಾ ಶಂಕರ ಆಂಗ್ಲ ಮಾಧ್ಯಮ ಶಾಲೆ ಅಥಣಿ ಇವರಿಂದ ಜರುಗಿದವು.

ಫ್ರೆಶ್ ನ್ಯೂಸ್

Latest Posts

Featured Videos