ಹಳ್ಳಿ ಹಳ್ಳಿಗೂ ಬಂತು ಸುಂಕ ವಸೂಲಾತಿ ಕೇಂದ್ರ.!

ಹಳ್ಳಿ ಹಳ್ಳಿಗೂ ಬಂತು ಸುಂಕ ವಸೂಲಾತಿ ಕೇಂದ್ರ.!

ಅರಕಲಗೂಡು, ಡಿ. 24:  ಹಾಸನ ಮತ್ತು ಪಿರಿಯಾಪಟ್ಟಣ ನಡುವಿನ ರಾಜ್ಯ ಹೆದ್ದಾರಿಯಾಗಿರೋ 21ರಲ್ಲಿ ಓಡಾಡ ಬೇಕಾದ್ರೆ ಇನ್ನು ಮುಂದೆ 100ಕ್ಕೂ ಅಧಿಕ ರೂ. ಟೋಲ್ ಕಟ್ಟಬೇಕು. ಹಳೇಬೀಡು – ಹಾಸನ – ಅರಕಲಗೂಡು – ರಾಮನಾಥಪುರ-ಪಿರಿಯಾಪಟ್ಟಣ – ಆನೆಚೌಕೂರು ನಡುವಿನ ರಸ್ತೆಗೆ ಟೋಲ್ ಪ್ರಾರಂಭವಾಗುತ್ತಿದೆ. ಹೌದು, ಹಾಸನದಿಂದ ನೀವು ಅರಕಲಗೂಡು ಗೊರೂರು ಬಳಿ ಮತ್ತು ರಾಮನಾಥಪುರದ ನಿಲುವಾಗಿಲು ಬಳಿ ರಾಜ್ಯ ಸರ್ಕಾರ ಖಾಸಗಿ ಕಂಪನಿಯವರಿಂದ ರಸ್ತೆ ನಿರ್ಮಾಣ ಮಾಡಿಸಿ ಟೋಲ್ ಮೂಲಕ ಸುಂಕ ವಸೂಲಾತಿ ಮಾಡಿಸಲು ಮುಂದಾಗಿರುವುದು ಈ ಭಾಗದ ರೈತಾಪಿ ವರ್ಗದವರಿಗೆ ಗಾಯದ ಮೇಲೆ ಬರೆಯೆಳೆದಂತಾಗಿದೆ.

ಇನ್ನು ವಾರದಲ್ಲಿ 3 ದಿನ ಕೊಣನೂರು, ರಾಮನಾಥಪುರ, ಅರಕಲಗೂಡು ಸಂತೆ ನಡೆಯುತ್ತೆ. ಬೆಂಬಲ ಬೆಲೆಯಿಲ್ಲದೇ ಬೆಳೆದ ತರಕಾರಿಯನ್ನ ಮಾರಾಟ ಮಾಡಲು ಸಂತೆಗೆ ಹೋಗುವ ರೈತರಿಗೆ ಸಂತೆಸುಂಕ, ಮಾರಾಟ ಸುಂಕ, ರಸ್ತೆ ಸುಕ್ತ ಹೀಗೆ ನಾನಾ ಸುಂಕ ಕಟ್ಟಿ ಬರಿಗೈಯಲ್ಲಿ ಮನೆಗೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರೈತ ಕೃಷಿ ಮಾಡಿ ಬದುಕು ಸಾಗಿಸುವುದೇ ದುಸ್ತರವಾಗಿರುವಾಗ ಸುಂಕ ಕಟ್ಟುವುದು ಎಲ್ಲಿ. ವೀಕೆಂಡ್ ನಲ್ಲಿ ಸ್ವಲ್ಪ ವಾಹನಗಳು ಓಡಾಡುತ್ತವೆ ಎಂಬ ಕಾರಣಕ್ಕೆ ರೈತಾಪಿ ವರ್ಗದವರಿಗೆ ಬರೆಯೆಳೆಯುವುದು ಎಷ್ಟು ಸರಿ. ಮಾಹಿತಿ ಪ್ರಕಾರ 30 ವರ್ಷಗಳ ಕಾಲ ಟೋಲ್ ಶುಲ್ಕ ಕಟ್ಟಬೇಕು ಎಂದಾದ್ರೆ ಇದು ಹಗಲು ದರೋಡೆ ಎಂಬುದು ಸ್ಪಷ್ಟವಾಗುತ್ತೆ. ಹುಟ್ಟು-ಸಾವು-ನಡುವೆ ಸಾಕಷ್ಟು ಸುಂಕ ಕಟ್ಟುತ್ತಿದ್ದು, ನಾವು ಮುಂದೆ ಎಲ್ಲಾದ್ರು ನಿಲ್ಲೋದಿಕ್ಕೂ ಟ್ಯಾಕ್ಸ್ ಬರಬಹುದು ಎನ್ನುತ್ತಾರೆ ಸ್ಥಳೀಯರು.

ಒಟ್ಟಾರೆ ಹಳ್ಳಿ-ಹಳ್ಳಿಗೂ ರಸ್ತೆ ಸುಂಕ ವಸೂಲಾತಿ ಕೇಂದ್ರ ಕಾಲಿಡುತ್ತಿದ್ದು, ಜನಸಾಮಾನ್ಯರಿಗೆ, ರೈತಾಪಿ ವರ್ಗದವರಿಗೆ ಸುಂಕವೆಂಬ ಶೂಲ ಜೀವನಕ್ಕೆ ಚುಚ್ಚಲು ಹೊರಟಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದ್ರೆ  ಕ್ಯಾಬಿನೆಟ್ ನಲ್ಲಿ  ಅನುಮೋದನೆ ಪಡೆದು ಟೋಲ್ ರಸ್ತೆಯನ್ನ ಮುಕ್ತಗೊಳಿಸಬಹುದು ಅಂತಹ ಇಚ್ಚಾಶಕ್ತಿ ಯಾವ ಶಾಸಕತ್ರಯರಿಗಿದೆ ಗೊತ್ತಿಲ್ಲ. ಏಕೆಂದರೆ ಈ ರಸ್ತೆ ಹಾಸನ ಕ್ಷೇತ್ರ, ಅರಕಲಗೂಡು ಕ್ಷೇತ್ರ ಹಾಗೂ ಪಿರಿಯಾಪಟ್ಟಣ ಕ್ಷೇತ್ರಕ್ಕೆ ಒಳಪಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos