ಸೂರು ನೀಡುವ ನಾಡಕಚೇರಿಯ ಸೂರೆ ಚೂರುಚೂರು

ಸೂರು ನೀಡುವ ನಾಡಕಚೇರಿಯ ಸೂರೆ ಚೂರುಚೂರು

ಬೇಲೂರು, ನ. 17: ಮನೆ ಇಲ್ಲದವರಿಗೆ ಸೂರು ನೀಡಿ ಬದುಕಿಗೊಂದು ಆಧಾರ ಕಲ್ಪಿಸುವ ನಾಡ ಕಚೇರಿಯ ಸೂರೆ ಸೋರುತ್ತಿದೆ ಎಂದರೆ ಏನನ್ನಬೇಡ.

ಇದು ನೂರಕ್ಕೆ ನೂರು ಪರ್ಸಂಟ್ ನಿಜ. ಪಕ್ಕಾ ಮಲೆನಾಡ ಭಾಗವಾದ ಅರೇಹಳ್ಳಿಯಲ್ಲಿ ಇರುವ ಸ್ವತಂತ್ರ್ಯಪೂರ್ವದಲ್ಲಿ ನಿರ್ಮಾಣವಾಗಿರುವ ಸೋರುವ ನಾಡಕಚೇರಿಯ ಸ್ಥಿತಿ ಇದು. ಕಟ್ಟಡದ ಮುಂಭಾಗ ಬಣ್ಣವಿಲ್ಲದಿದ್ದರೂ ನೋಡುವುದಕ್ಕೆ ಪರವಾಗಿಲ್ಲ ಎನ್ನುವಂತಿರುವ ಮಂಗಳೂರು ಹೆಂಚಿನ ಕಟ್ಟಡದಲ್ಲಿ ಇರುವ ನಾಡಕಚೇರಿಯ ಒಳಗೆ ಹೋದರೆ ನಿಜಬಣ್ಣ ತಿಳಿಯುತ್ತದೆ.

ಅಂದರೆ, ಎಲ್ಲೋ ಒಂದು ಕಡೆ ಹೆಂಚು ಒಡೆದು  ಸೋರುತ್ತಿದೆ, ಗೋಡೆಯ ಮೇಲೆ ನೀರು ಇಳಿದು ಕಪ್ಪಾಗಿದೆ ಎಂದು ತಿಳಿದಿದ್ದರೆ ತಪ್ಪಾದೀತು. ಈ ನಾಡಕಚೇರಿಯಲ್ಲಿ ಸಿಬ್ಬಂದಿ ಕುಳಿತುಕೊಂಡು ಕರ್ತವ್ಯ ನಿರ್ವಹಿಸುವ ಕೊಠಡಿಯ ಮೇಲ್ಚಾವಣಿಯ ಹಲವಾರು ಹೆಂಚುಗಳು ಇಲ್ಲದೆ ಮಳೆ ಬಂದಾಗ ಮಳೆಯ ನೀರು ಕಚೇರಿಯೊಳಗೆ ಧಾರಾಕಾರವಾಗಿ ಸುರಿಯುತ್ತದೆ. ಪರಿಣಾಮ ಮೇಜು, ಕುರ್ಚಿಗಳು ನೆನೆದು ಹಾಳಾಗುತ್ತಿವೆ. ದಾಖಲೆಗಳ ಇಟ್ಟಿರುವ ಅಲ್ಮೆರಾಗಳ ಮೇಲೂ ನೀರು ಬೀಳುತ್ತಿದ್ದು, ಈಗಾಗಲೆ ಕೆಲವೊಂದು ದಾಖಲಾತಿಗಳಿಗೆ ಹಾನಿ ಆಗಿದೆ ಎನ್ನಲಾಗಿದೆ.

ರಾಜಸ್ವ ನಿರೀಕ್ಷಕರು ಕುಳಿತುಕೊಳ್ಳುವ ಸ್ಥಳದಲ್ಲಿ ನೀರು ಬೀಳದಂತೆ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಕಟ್ಟಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಉಪ ತಹಸೀಲ್ದಾರ್ ಸೇರಿದಂತೆ ಒಟ್ಟು 21 ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಈ ಸ್ವತಂತ್ರಪೂರ್ವದ ಕಟ್ಟಡದ ಮೇಲ್ಚಾವಣಿ ಯಾವಾಗ ಕಳಚಿ ಬೀಳುವುದೊ ಎಂಬ ಆತಂಕದಲ್ಲಿ ಸಿಬ್ಬಂದಿ ಇದ್ದಾರೆ. ಶೌಚಾಲಯದ ಕೊಠಡಿ ಹೀನಾಯ ಸ್ಥಿತಿ ತಲುಪಿದ್ದು, ಗೋಡೆಗಳು ಉದುರಿವೆ. ಶೌಚಾಲಯಕ್ಕೆ ಹೊರಗಡೆ ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮೇಲ್ಚಾವಣಿಯ ಮರಗಳು ಗೆದ್ದಲು ಹುಳು ತಿಂದು ಮುರಿದು ಬೀಳುವ ಹಂತಕ್ಕೆ ತಲುಪಿದೆ. ಬೇಸಿಗೆ ಕಾಲದಲ್ಲಿ ಮರದ ಚೂರುಗಳು, ಹೆಂಚಿನ ಪುಡಿ ಉದುರುವುದು ಸಾಮಾನ್ಯವಾಗಿದೆ.

ಕಚೇರಿಯ ಬಹುತೇಕ ಕಿಟಿಕಿಗಳ ಬಾಗಿಲುಗಳ ತೆಗೆಯುವುದಕ್ಕೆ ಆಗದಂತೆ ಭದ್ರವಾಗಿಬಿಟ್ಟಿವೆ. ಯಾವ ಸಂದರ್ಭ ಮೇಲ್ಚಾವಣಿ ನೆಲಕಚ್ಚುತ್ತೋ ಎಂಬ ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಧಿಕಾರಿ ಹೇಳಿಕೆ

ನಾವುಗಳು ಜೀವಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಮಳೆಗಾಲದಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತದೆ. ಬೇಸಿಗೆ ಕಾಲದಲ್ಲಿ ಗಾಳಿ ಬೀಸಿದಾಗ ಮೇಲ್ಚಾವಣಿಯಿಂದ ಉದುರುವ ಚೂರುಗಳಿಂದ ನಾವು ಪಾರಾಗುವುದು ಕಷ್ಟವಾಗಿದೆ. ಮರಗಳು ಕುಟ್ಟು ಹೊಡೆದಿದೆ. ಯಾವ ಸಂದರ್ಭ ಮೇಲ್ಚಾವಣಿ ನೆಲಕ್ಕೆ ಉರುಳುವುದೊ ತಿಳಿಯುತ್ತಿಲ್ಲ. ಮಳೆಯ ನೀರು ಬಿದ್ದು ಈಗಾಗಲೆ ಸಾಕಷ್ಟು ದಾಖಲೆಗಳು ಹಾಳಾಗಿವೆ. ಸಾಧ್ಯವಾದಷ್ಟು ದಾಖಲೆಗಳನ್ನು ಪ್ಲಾಸ್ಟಿಕ್‍ನಿಂದ ಕಟ್ಟಿದ್ದರೂ ಪ್ರಯೋಜನವಾಗುತ್ತಿಲ್ಲ. ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ನಿಲ್ಲಲೂ ಆಗುತ್ತಿಲ್ಲ. ಶಾಸಕರಿಗೂ ವಿಷಯ ತಿಳಿಸಿದ್ದೇವೆ. ಶಾಸಕರು 2 ಲಕ್ಷರೂ. ಅನುದಾನ ನೀಡುವುದಾಗಿ ತಿಳಿಸಿದ್ದರು ಆದರೂ ಈವರಗೆ ಅನುದಾನ ಬಂದಿಲ್ಲ. ವಿಧಿಯಿಲ್ಲದೆ ಜೀವಭಯದ ನಡುವೆ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಅಂಕೇಗೌಡ, ರಾಜಸ್ವ ನಿರೀಕ್ಷಕ ನಾಡಕಚೇರಿ ಅರೇಹಳ್ಳಿ ಅವರು ತಿಳಿಸಿದರು.

ಅರೇಹಳ್ಳಿ ನಾಡಕಚೇರಿ ದುರಸ್ತಿ ಮಾಡಿಸುವಲ್ಲಿ ಮೇಲಾಧಿಕಾರಿಗಳು ಹಾಗೂ ಶಾಸಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಾರ್ವಜನಿಕರು ಹಾಗೂ ನೌಕರರ ಜೀವದ ಜೊತೆ ಇವರುಗಳು ಚಲ್ಲಾಟ ಆಡುತ್ತಿದ್ದಾರೆ. ಶಾಸಕರ, ಮಂತ್ರಿಗಳ ಭವನ, ಮನೆ ಕಿಂಚಿತ್ತು ಸೋರಿದರೆ ಸಾಕು ತಕ್ಷಣವೆ ಅನುದಾನ ನೀಡಿ ರಿಪೇರಿ ಮಾಡಿಸುವ ಜನಪ್ರತಿನಿಧಿಗಳು ನಾಡಕಚೇರಿಯ ಅಧಿಕಾರಿ ಸಿಬ್ಬಂದಿ ಪ್ರಾಣದ ಜತೆ ಆಟ ಆಡುವುದು ಸರಿಯಲ್ಲ. ಶೀಘ್ರ ದುರಸ್ತಿ ಮಾಡಿಸದೆ ಇದ್ದರೆ ಅರೇಹಳ್ಳಿ ವ್ಯಾಪ್ತಿಯ ಜನರೊಂದಿಗೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಅರೇಹಳ್ಳಿ ನಿಂಗರಾಜು ಜಿಲ್ಲಾ ದಸಂಸ ಸಂಚಾಲಕ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos