ರಾಮನಗರ: ನವೆಂಬರ್ 1 1956 ರಂದು ಮೈಸೂರು ರಾಜ್ಯವೆಂದು ನಾಮಕರಣಗೊಂಡು ಉದಯವಾಯಿತು. ಭಾರತದ ಇತರ ಭಾಗಗಳಲ್ಲಿಯೂ ಸಹ ಭಾಷಾವಾರು ವಿಂಗಡಣೆ ಮಾಡಿ 1960ರಲ್ಲಿ ಬಾಂಬೆ ರಾಜ್ಯವನ್ನು ವಿಭಜಿಸಿ ಮಹಾರಾಷ್ಟ್ರ ಮತ್ತು ಗುಜರಾತ್ ಎಂದು ಎರಡು ರಾಜ್ಯವನ್ನಾಗಿ ವಿಂಗಡಿಸಲಾಯಿತು ಎಂದು ಸಾರಿಗೆ, ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ (ನ. 01) ರ ಶುಕ್ರವಾರ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.
ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ಅವರು, 1969ರಲ್ಲಿ ಮದ್ರಾಸ್ ರಾಜ್ಯವನ್ನು ತಮಿಳುನಾಡು ಎಂದು ಮರುನಾಮಕರಣ ಮಾಡಿಲಾಯಿತು. ಆನಂತರ ಮೈಸೂರು ರಾಜ್ಯವನ್ನು ನವೆಂಬರ್ 1 1973 ರಂದು ಅಂದಿನ ಮುಖ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸರವರು ವಿಶಾಲಾರ್ಥದಲ್ಲಿ ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಿ ಇಂದಿಗೆ 51 ವರ್ಷ ಪೂರ್ಣಗೊಂಡಿರುತ್ತದೆ.
ಇಂದು ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದ ದಿನ. 1956ಕ್ಕೂ ಮೊದಲು ಕರ್ನಾಟಕ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ದಕ್ಷಿಣದ ಕೆಲವು ಜಿಲ್ಲೆಗಳು ಮೈಸೂರು ಸಂಸ್ಥಾನದಲ್ಲಿದ್ದರೆ, ಕಲಬುರಗಿ, ಬೀದರ, ರಾಯಚೂರು ಜಿಲ್ಲೆಗಳು ಹೈದ್ರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು. ರಾಜ್ಯದ ವಾಯುವ್ಯ ಭಾಗ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದರೆ, ದಕ್ಷಿಣ ಕನ್ನಡ, ಕೊಳ್ಳೇಗಾಲ, ಬಳ್ಳಾರಿ ಮುಂತಾದ ಪ್ರದೇಶಗಳು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದವು. ಕೊಡಗು ಜಿಲ್ಲೆ ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿದಿತ್ತು.
ಸ್ವಾತಂತ್ರ್ಯದ ನಂತರ ಪ್ರತ್ಯೇಕ ರಾಜ್ಯದ ಕೂಗು ಕೇಳಿಸಿದಾಗ ಆಂಧ್ರ ಪ್ರದೇಶದಲ್ಲಿ ತೆಲುಗು ಮಾತನಾಡುವವರು ಶ್ರೀ ಪೊಟ್ಟಿ ಶ್ರೀರಾಮುಲು ರವರ ನೇತೃತ್ವದಲ್ಲಿ ಒಂದು ದೊಡ್ಡ ಪ್ರಮಾಣದಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಮಡಿಯುತ್ತಾರೆ. ಆಗಿನ ಮದ್ರಾಸ್ ಮುಖ್ಯಮಂತ್ರಿಯಾಗಿದ್ದ ಶ್ರೀ ರಾಜಗೋಪಾಲಚಾರಿ ರವರು ತೆಲುಗು ಮಾತನಾಡುವವರನ್ನು ಆಂಧ್ರ ಪ್ರದೇಶವೆಂದು ಪ್ರತ್ಯೇಕ ರಾಜ್ಯ ಮಾಡುವುದು ಸೂಕ್ತವೆಂದು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರುರವರಿಗೆ ಪತ್ರ ಬರೆಯುತ್ತಾರೆ. ನೆಹರುರವರು ಒಂದು ಸಮಿತಿಯನ್ನು ರಚಿಸಿ ವರದಿಯನ್ನು ಪಡೆದು ಭಾಷೆಯ ಆಧಾರಿತ ರಾಜ್ಯಗಳನ್ನು ರಚಿಸಲು ಅನುಮೋದನೆ ನೀಡುತ್ತಾರೆ.
ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಸ್ಮರಣೀಯರ ಸಂಖ್ಯೆ ಬಹುದೊಡ್ಡದು. ಡೆಪ್ಯೂಟಿ ಚನ್ನಬಸಪ್ಪ, ಹುಯಿಲಗೋಳ ನಾರಾಯಣ ರಾವ್, ಅನಕೃ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರು ಹಾಗೂ ಅಸಂಖ್ಯಾತ ಸಾಹಿತಿಗಳನ್ನು, ಲೇಖಕರನ್ನು, ಸಂಘ ಸಂಸ್ಥೆಗಳನ್ನು ಹಾಗೂ ಹೋರಾಟಗಾರರನ್ನು ನೆನೆಯಬೇಕು.
ರಾಮನಗರ ಎಂದೊಡನೆ ನಮಗೆ ನೆನಪಾಗುವುದು ರೇಷ್ಮೆ, ವಿಶ್ವಮಟ್ಟದ ಕೈಗಾರಿಕೆಗಳು, ರಾಜ್ಯದ ಗಮನ ಸೆಳೆಯುತ್ತಿದೆ. ರಾಮನಗರ ಜಿಲ್ಲೆ ಗೊಂಬೆಗಳ ನಾಡು, ಜಾನಪದ ಕಲೆಗಳ ತವರು. ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜಾನಪದ ವಸ್ತು ಸಂಗ್ರಹಾಲಯ ಜಾನಪದ ಲೋಕ.
ಎಚ್.ಎಲ್.ನಾಗೇಗೌಡರ ಕನಸಿನ ಕೂಸಾದ ಜಾನಪದ ಲೋಕಕ್ಕೆ ಜಾಗತಿಕ ಮನ್ನಣೆ ದೊರೆತಿದ್ದು, ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಈ ವರ್ಷ ಜಾನಪದ ಲೋಕ ಸ್ಥಾನ ಪಡೆಯುವ ಮೂಲಕ ರಾಮನಗರ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು.