ಥಣಿಸಂದ್ರ-ನಾಗವಾರ ರಸ್ತೆ ಗುಂಡಿಮಯ, ಸಂಚಾರ ದುಸ್ತರ

ಥಣಿಸಂದ್ರ-ನಾಗವಾರ ರಸ್ತೆ ಗುಂಡಿಮಯ, ಸಂಚಾರ ದುಸ್ತರ

ಯಲಹಂಕ:ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹೆಗಡೆನಗರ-ನಾಗವಾರ ಮುಖ್ಯರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ.

ಈ ರಸ್ತೆಯು ಬಳ್ಳಾರಿ ಮುಖ್ಯರಸ್ತೆ, ರೇವಾ ಕಾಲೇಜು ಜಂಕ್ಷನ್, ಹೆಣ್ಣೂರು-ಬಾಗಲೂರು ಮುಖ್ಯರಸ್ತೆ ಹಾಗೂ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಎರಡು ವರ್ಷಗಳಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ರಸ್ತೆ ಪಕ್ಕದಲ್ಲಿ ಚರಂಡಿ ಇದ್ದರೂ ಹೂಳಿನಿಂದ ಮುಚ್ಚಿಕೊಂಡಿರುವುದರಿಂದ ಮಳೆ ಬಂದ ಸಂದರ್ಭದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತದೆ. ವಾಹನ ಸವಾರರು ಭಯದಿಂದ ಸಂಚರಿಸಬೇಕಿದೆ. ಥಣಿಸಂದ್ರ ವೃತ್ತದ ಮೂಲಕ ನಾಲ್ಕು ಕಡೆಗೆ ರಸ್ತೆ ಹಾದುಹೋಗಿರುವುದರಿಂದ ಸಂಚಾರ ದಟ್ಟಣೆ ವೇಳೆಯಲ್ಲಿ ವಾಹನಗಳು ಮಂದಗತಿಯಲ್ಲಿ ಸಾಗುತ್ತವೆ. ಇದರಿಂದಾಗಿ, ಸ್ಥಳೀಯರು ಗ್ರಾಮದೊಳಗೆ ಸಂಚರಿಸಲು ಪ್ರಯಾಸಪಡಬೇಕಾಗಿದೆ’ ಎಂದು ಥಣಿಸಂದ್ರ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಶಾರದಮ್ಮ ದೂರಿದರು.

ಅಶ್ವತ್ಥನಗರದ ಬಳಿ ವಾಲ್ ಅಳವಡಿಸಲು ಜಲಮಂಡಳಿಯವರು ತೆಗೆದಿರುವ ದೊಡ್ಡ ಗುಂಡಿಯನ್ನು ಎರಡು ತಿಂಗಳು ಕಳೆದರೂ ಮುಚ್ಚಿಲ್ಲ. ಕಿರಿದಾದ ರಸ್ತೆಯಲ್ಲೇ ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸಬೇಕಿದೆ’ ಎಂದು ಥಣಿಸಂದ್ರ ನಿವಾಸಿ ಸಿ.ಚಂದ್ರಶೇಖರ್ ಹೇಳಿದರು.

ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಬಿದ್ದು ಗಾಯಗೊಳ್ಳುವುದು ಸಾಮಾನ್ಯ. ಕಳೆದ ವಾರ ಒಂದೇ ದಿನದಲ್ಲಿ ೫ ಮಂದಿ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡರು. ಬಿಬಿಎಂಪಿ ಅಧಿಕಾರಿಗಳು ಇತ್ತೀಚೆಗೆ ಎರಡು ಸಲ ರಸ್ತೆಗೆ ಜಲ್ಲಿ ಸುರಿದು ತೇಪೆ ಹಾಕುವ ಕೆಲಸ ಮಾಡಿದರು. ಆದರೆ, ಒಂದೇ ಮಳೆಗೆ ಜಲ್ಲಿ ಮತ್ತು ಮಣ್ಣು ಕೊಚ್ಚಿಕೊಂಡು ಹೋಯಿತು’ ಎಂದು ಸ್ಥಳೀಯ ನಿವಾಸಿ ಬಾಬು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos