ಟೀಂ ಇಂಡಿಯಾ ಮಹಾ ಕುಸಿತ

ಟೀಂ ಇಂಡಿಯಾ ಮಹಾ ಕುಸಿತ

ಅಡಿಲೇಡ್: ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಹೀನಾಯ ಕುಸಿತ ಕಂಡಿತು. ಒಂದಿಡೀ ಇನ್ನಿಂಗ್ಸ್ ನಲ್ಲಿ ತಂಡ ಗಳಿಸಿದ್ದು 36 ರನ್ ಮಾತ್ರ. ಇದರೊಂದಿಗೆ 46 ವರ್ಷಗಳ ಹಿಂದಿನ ದಾಖಲೆ ಶನಿವಾರ ಮುರಿಯಲ್ಪಟ್ಟಿತು. ಭಾರತದ ಈವರೆಗಿನ ಕನಿಷ್ಠ ಟೆಸ್ಟ್ ಮೊತ್ತ 42 ರನ್. ಇದು 1974ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ದಾಖಲಾಗಿತ್ತು.
ಅಂದು ಮೈಕ್ ಡೆನ್ನಿಸ್ ನಾಯಕತ್ವದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 629 ರನ್ ಪೇರಿಸಿತ್ತು. ಜವಾಬು ನೀಡಿದ ಭಾರತ 302 ರನ್ ಮಾಡಿತು. ಆದರೆ ಫಾಲೋಆನ್‌ನಿಂದ ಪಾರಾಗಲಾಗಲಿಲ್ಲ. ದ್ವಿತೀಯ ಇನ್ನಿಂಗ್ಸ್ನಲ್ಲಿ 17 ಓವರ್ ಆಡುವಷ್ಟರಲ್ಲಿ 42 ರನ್ನಿಗೆ ಸರ್ವಪತನ ಕಂಡು ಇನ್ನಿಂಗ್ಸ್ ಹಾಗೂ 285 ರನ್ನುಗಳ ಭಾರೀ ಸೋಲಿಗೆ ಗುರಿಯಾಯಿತು. ಅಂದು ಭಾರತದ ಸರದಿಯಲ್ಲಿ ಏಕನಾಥ್ ಸೋಲ್ಕರ್ ಮಾತ್ರ ಹತ್ತರ ಗಡಿ ದಾಟಿದ್ದರು (ಔಟಾಗದೆ 18). ಕ್ರಿಸ್ ಓಲ್ಡ್ 21ಕ್ಕೆ 5, ಜೆಫ್ ಅರ್ನಾಲ್ಡ್ 19ಕ್ಕೆ 4 ವಿಕೆಟ್ ಉರುಳಿಸಿ ಭಾರತದ ಕತೆ ಮುಗಿಸಿದ್ದರು. ಅಂದು ಅಜಿತ್ ವಾಡೇಕರ್ ಭಾರತ ತಂಡದ ನಾಯಕರಾಗಿದ್ದರು. ಕ್ರಿಕೆಟ್ ದಾಖಲೆಗಳಾವುವೂ ಶಾಶ್ವತವಲ್ಲ ಎಂದು ವಿರಾಟ್ ಕೊಹ್ಲಿ ಪಡೆ 46 ವರ್ಷಗಳ ಬಳಿಕ ಸಾಧಿಸಿ ತೋರಿಸಿತು! ಭಾರತದ ದ್ವಿತೀಯ ಇನ್ನಿಂಗ್ಸ್ನಲ್ಲಿ ಯಾರೂ ಎರಡಂಕೆಯ ಮೊತ್ತ ದಾಖಲಿಸಲಿಲ್ಲ. ಎದುರಿಸಿದ್ದು ಬರೀ 21.2 ಓವರ್. ಭಾರತದ ಸರದಿಯ ಇಂತಹ ವೈರಾಗ್ಯ ಹುಟ್ಟಿಸುವ ಸಂಗತಿಗಳು ಸಾಕಷ್ಟಿವೆ!

ಫ್ರೆಶ್ ನ್ಯೂಸ್

Latest Posts

Featured Videos