ಹೆದ್ದಾರಿ ಪಕ್ಕ ಗಬ್ಬುನಾರುತ್ತಿರುವ ಕಸದ ರಾಶಿ

ಹೆದ್ದಾರಿ ಪಕ್ಕ ಗಬ್ಬುನಾರುತ್ತಿರುವ ಕಸದ ರಾಶಿ

ಬೇಲೂರು, ಡಿ. 12:  ಮಹತ್ವದ ಸಂಕಲ್ಪ ಯೋಜನೆಯಾದ ಸ್ವಚ್ಚ ಭಾರತ್ ದೇಶಾದ್ಯಂತ ಸಕ್ರಿಯವಾಗಿ ನಡೆಯುತ್ತಿದ್ದರೂ ಈ ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆಯುವ ಪ್ರವೃತ್ತಿ ಇನ್ನೂ ಮುಂದುವರಿದಿದ್ದು, ಕಾನೂನುಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.

ಈ ಸಮಸ್ಯೆಯಿಂದ ರಸ್ತೆ ಬದಿಗಳು ಅಸಹ್ಯಕರವಾಗಿ ಗೋಚರಿಸುತ್ತಿವೆ. ವಿಶ್ವ ವಿಖ್ಯಾತ ಈ ನಗರದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತ್ಯಾಜ್ಯದ ರಾಶಿಗಳಿಂದಾಗಿ ಅಕ್ಷರಶಃ ಕಸ ಹಾಕುವ ಕೊಂಪೆಯಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ನಾಯಕರು ಮತ್ತು ಅಧಿಕಾಗಳು ಸಂಪೂರ್ಣವಾಗಿ ಜನರ ಸಮಸ್ಯೆಗಳನ್ನು ಮರೆತು ನಿದ್ರೆಗೆ ಜಾರಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು ಇಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿರುವುದು ಹಾಸನದಿಂದ ಬೇಲೂರು  ನಗರವನ್ನು ಹಾದುಹೋಗಿರುವ ಹೊಸನಗರದ  ಅಕ್ಕಪಕ್ಕದಲ್ಲಿ ಕಸ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯಲಾಗಿದೆ. ಹೀಗೆ ಹಲವು ತಿಂಗಳಿನಿಂದ ಕಸದ ರಾಶಿ ಬೀಳುತ್ತಿದ್ದು, ಈ ಭಾಗದಲ್ಲಿ ಸಂಚರಿಸುವವರಿಗೆ ಅನೈರ್ಮಲ್ಯದ ದರ್ಶನವಾಗುತ್ತಿದೆ.

ಈ ಹೆದ್ದಾರಿಯು ವಿಶ್ವ ವಿಖ್ಯಾತ ಬೇಲೂರಿಗೆ ಸಂಪರ್ಕ ಕಲ್ಪಿಸುತ್ತದೆ. ಚಿಕ್ಕಮಗಳೂರು, ಧರ್ಮಸ್ಥಳ ಪ್ರವಾಸಕ್ಕೆ ಹೋಗುವವರು ಇದೇ ದಾರಿಯಲ್ಲಿ ಹೋಗಬೇಕು. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಅವರಿಗೆ ಈ ಕಸದ ರಾಶಿ ಕಣ್ಣಿಗೆ ಬೀಳುತ್ತಿದ್ದು, ಜೊತೆಗೆ ದುರ್ನಾತ ಕೂಡ ಬೀರುತ್ತಿದೆ.

ನಿವಾಸಿಗಳ ಯಾತನೆ: ಕುಮಾರಸ್ವಾಮಿ ಬಡಾವಣೆಯ ಪ್ರವೇಶದಿಂದ  ಹಿಡಿದು ರಸ್ತೆ ಬೀದಿಯ ಇಕ್ಕೆಲಗಳಲ್ಲಿ ಕಸ, ಮದ್ಯದ ಖಾಲಿ ಬಾಟಲಿಗಳು, ಮನೆಯ ಅವಶೇಷಗಳು, ಪ್ಲಾಸ್ಟಿಕ್‌ ಹಾಗೂ ವಿವಿಧ ತ್ಯಾಜ್ಯಗಳು ಅಲ್ಲಲ್ಲಿ ರಾಶಿಯಾಗಿ ಬಿದ್ದಿವೆ. ಇದರ ಕುರಿತು ಸಾಕಷ್ಟು ಬಾರಿ ಇಲ್ಲಿನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ರವರಿಗೆ ತಿಳಿಸಿದರು ಕೂಡ ಸಮಸ್ಯೆ ಬಗೆಹರಿಸಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ನಿದ್ರೆಗೆ ಜಾರಿ ಬಹಳ ದಿನಗಳೆ ಕಳೆದಿದೆ ಎನ್ನುತ್ತಾರೆ  ಇಲ್ಲಿನ ನಿವಾಸಿಗಳು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ  ಜಯಕರ್ನಾಟಕ ಸಂಘಟನೆ  ಬೇಲೂರು ತಾಲ್ಲೂಕು ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಇದು ವಿಶ್ವ ವಿಖ್ಯಾತಿ ಬೇಲೂರು ಎಂದು ಹೆಸರು ಪಡೆದಿರುವ ನಗರ ಇಲ್ಲಿರುವ ಪ್ರವಾಸಿ ತಾಣವನ್ನು ನೋಡಲು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಿಂದ ಪ್ರವಾಸಿಗರು ಬರುತ್ತಾರೆ, ಬರುವ ಪ್ರವಾಸಿಗರನ್ನು ಈ  ಗಬ್ಬು ನಾರುತ್ತಿರುವ ಕಸದ ರಾಶಿ ಸ್ವಾಗತಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಸ್ವಚ್ಚತೆಯಲ್ಲಿ ಮೇಲ್ದರ್ಜೆಗೆ ಏರಿದ ನಗರವನ್ನು ಈಗಿರುವ ಪುರಸಭೆ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಗಬ್ಬುನಾರುವ ಈ ಕಸದ ರಾಶಿಯ ನಡುವೆ ಶಾಲೆ ವಿಧ್ಯಾರ್ಥಿಗಳು ಮತ್ತು ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಪುರಯ ಅಧಿಕಾರಿಗಳು ಎಚ್ಚೆತ್ತುಕೊಂಡು ಗಬ್ಬು ನಾರುತ್ತಿರುವ ಕಸದರಾಶಿಯನ್ನು ತೆರವುಗೊಳಿಸದಿದ್ದಲ್ಲಿ ಹೊಸನಗರ ನಿವಾಸಿಗಳು ಪುರಸಭೆ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos