ಸಿದ್ದರಾಮಯ್ಯ ಅವರದ್ದೇ ಒಂದೂವರೆ ಲಕ್ಷ ಕೋಟಿ ಸಾಲದ ಪಾಲಿದೆ

ಸಿದ್ದರಾಮಯ್ಯ ಅವರದ್ದೇ ಒಂದೂವರೆ ಲಕ್ಷ ಕೋಟಿ ಸಾಲದ ಪಾಲಿದೆ

ಮೈಸೂರು, ಮಾ. 04: ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು. ಬಜೆಟ್ ಸರ್ಕಾರದ ಜನಪ್ರಿಯತೆ ಹೆಚ್ಚಿಸುವುದಿಲ್ಲ. ಜನರ ಅನುಕೂಲಕ್ಕಾಗಿ ಬಜೆಟ್ ಮಾಡಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು. ಮಾತೆತ್ತಿದರೆ 14 ಬಾರಿ ಬಜೆಟ್ ಮಂಡಿಸಿದ್ದೇನೆ ಅಂತಾರೆ, ಆದರೆ ಬಜೆಟ್‌ನಲ್ಲಿ ಆರ್ಥಿಕ ಶಿಸ್ತು ಶಿಷ್ಟಾಚಾರ ತರಲು ಅವರ ಕೈಯಲ್ಲಿ ಆಗಲಿಲ್ಲ. ರಾಜ್ಯಕ್ಕೆ ಮೂರು ಲಕ್ಷ ಕೋಟಿ ಸಾಲದ ಹೊರೆ ಇದೆ. ಅದರಲ್ಲಿ ಸಿದ್ದರಾಮಯ್ಯ ಅವರದ್ದೇ ಒಂದೂವರೆ ಲಕ್ಷ ಕೋಟಿ ಸಾಲದ ಪಾಲಿದೆ. ಸಿದ್ದರಾಮಯ್ಯ ಪರಮಾಧಿಕಾರದ ಹೆಸರಿನಲ್ಲಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರೇ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ. ಬೇಕಾಬಿಟ್ಟಿ ಯೋಜನೆಗಳ ಘೋಷಣೆ ಬೇಡ. ಉಳಿತಾಯದ ಬಜೆಟ್ ಮಾಡಿ. ಎಲ್ಲಾ ಸಿಎಂಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಂಡನೆ ಮಾಡಿ ಸಾಕು ಎಂದು ಸಲಹೆ ನೀಡಿದರು.

ಪಕ್ಷದ ವಕ್ತಾರರ ರೀತಿ ಮಾತಾಡಬೇಡಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಎಚ್.ಎಸ್.ದೊರೆಸ್ವಾಮಿ ಕುರಿತು ಶಾಸಕ ಯತ್ನಾಳ್ ನೀಡಿರುವ ಹೇಳಿಕೆ ಬಗ್ಗೆ ಎಚ್.ವಿಶ್ವನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಇಬ್ಬರದು ತಪ್ಪಿದೆ. ದೊರೆಸ್ವಾಮಿ ಅವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಅವರ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ. ಅವರು ಎಲ್ಲದಕ್ಕೂ ಬಾಯಿ ಹಾಕಬಾರದು. ಪಕ್ಷದ ವಕ್ತಾರರಂತೆ ಮಾತನಾಡಬಾರದು. ನಿಮ್ಮ ಗೌರವ ಉಳಿಸಿಕೊಳ್ಳಿ. ರಾಜಕೀಯದ ಕೊಳಚೆಗೆ ಹೋಗಿ ಬೀಳಬೇಡಿ. ರಾಜಕೀಯ ಪಕ್ಷಗಳಿಗೆ ನೀವು ದಾಳವಾಗಬೇಡಿ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos