ಶವಪೆಟ್ಟಿಗೆ ಪತ್ತೆ..!

  • In State
  • February 1, 2020
  • 223 Views
ಶವಪೆಟ್ಟಿಗೆ ಪತ್ತೆ..!

ಬಳ್ಳಾರಿ, ಫೆ. 1 : ಅದು ಗಣಿನಾಡು, ಬಿಸಿಲನಾಡು, ಸೌಂದರ್ಯ ತಾಣ ಮತ್ತು ಪ್ರವಾಸಿ ತಾಣ ಎಂಬ ಇತ್ಯಾದಿಗಳಿಂದ ಫೇಮಸ್ ಆದ ಜಿಲ್ಲೆ, ಆ ಜಿಲ್ಲೆಗೆ ಈಗ ಮತ್ತೊಂದು ಇತಿಹಾಸ ಸೇರ್ಪಡೆಯಾಗಿದ್ದು, 3400 ವರ್ಷಗಳ ಶವಪೆಟ್ಟಿಗೆ ಆನೆಯಾಕೃತಿಯಾಕಾರವಾಗಿ ಸಿಕ್ಕಿದೆ.
ವಿಶ್ವ ವಿಖ್ಯಾತ ಹಂಪಿ, ತುಂಬಿಹರಿಯುತ್ತಿರೋ ತುಂಗಭದ್ರಾ ನದಿ, ಹಚ್ಚಹಸಿರು ಹೊದ್ದಿರೋ ಸಂಡೂರು ಪ್ರದೇಶಗಳಿಂದ ಪ್ರವಾಸಿ ತಾಣವೇನಿಸಿಕೊಂಡು, ಗಣಿನಾಡು, ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಬಳ್ಳಾರಿ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಈಜಿಪ್ಟಿನ ಮಮ್ಮಿ ಮಾದರಿಯಲ್ಲಿ ಜಿಲ್ಲೆಯಲ್ಲೂ ಶವಸಂಸ್ಕಾರ ಮಾಡಲಾಗುತ್ತಿತ್ತು. ಇದಕ್ಕಾಗಿ ಮಣ್ಣಿನ ಪೆಟ್ಟಿಗೆಗಳನ್ನು ತಯಾರಿಸಲಾಗುತ್ತಿತ್ತು ಎಂಬ ಸಮಾಚಾರ ಬೆಳಕಿಗೆ ಬಂದಿದೆ. 2002 ರಲ್ಲಿ ಬಳ್ಳಾರಿ ತಾಲೂಕಿನ ಕುಡತಿನಿ ಹತ್ತಿರದ ಬೂದಿಗುಡ್ಡದಲ್ಲಿ ಸಂಶೋಧನೆ ವೇಳೆ ಮಣ್ಣಿನ ಶವಪೆಟ್ಟಿಗೆ ಪತ್ತೆಯಾಗಿತ್ತು. ಧಾರವಾಡದ ಕರ್ನಾಟಕ ಕನ್ನಡ ಮ್ಯೂಜಿಯಂನಲ್ಲಿದ್ದ ಮಣ್ಣಿನ ಶವಪೆಟ್ಟಿಗೆಯನ್ನು ಇದೀಗ ನಗರಕ್ಕೆ ತರಲಾಗಿದೆ. ಸುಮಾರು 3400 ವರ್ಷಗಳ ಅಂದಿನ ಶವಪೆಟ್ಟಿಗೆ ನೋಡಲು ಆನೆಯಾಕೃತಿಯಂತಿದೆ. ಆದರೆ, ಆರು ಸ್ಥಂಬಗಳನ್ನು ಹೊಂದಿರುವುದರಿಂದ ಇದು ಪ್ರಾಣಿಯ ಆಕಾರವಲ್ಲ ಎಂಬುದು ಪುರಾತತ್ವ ಸಂಶೋಧಕರ ಅಭಿಪ್ರಾಯವಾಗಿದೆ. ಈ ಮಣ್ಣಿನ ಶವಪೆಟ್ಟಿಯಲ್ಲಿ ಮೂಳೆಗಳು ಪತ್ತೆಯಾಗಿದ್ದವು. ಈ ಮೂಳೆಗಳನ್ನು ಪುಣೆಯ ಮಾನವಶಾಸ್ತ್ರ ತಜ್ಞರ ಬಳಿ ಸಂಶೋಧನೆಗೆ ಕಳುಹಿಸಲಾಗಿದ್ದು ಏಳು ವರ್ಷದ ಬಾಲಕನ ಮೂಳೆಗಳು ಎಂಬುದು ತಿಳಿದುಬಂದಿದೆ.
ಕ್ರಿಸ್ತಪೂರ್ವ 1400 ರಲ್ಲಿ ಅಂದಿನ ಜನಸಮೂಹದ ನಾಯಕರ ಕುಟುಂಬದ ಸದಸ್ಯರ ಶವಗಳನ್ನು ಬೃಹತ್ ಗಾತ್ರದ ಮಣ್ಣಿನ ಮಡಕೆಗಳಲ್ಲಿ ಮೃತರಿಗೆ ಪ್ರಿಯವಾದ ಆಹಾರ ಹಾಗೂ ಇತರ ವಸ್ತುಗಳೊಂದಿಗೆ ಹೂಳಲಾಗುತ್ತಿತ್ತು. ಅಂತ್ಯಕ್ರಿಯೆ ಬಳಿಕ ಅಸ್ಥಿಗಳನ್ನು ಮೃತರಿಗೆ ಪ್ರಿಯವಾದ ವಸ್ತುಗಳೊಂದಿಗೆ ಮಣ್ಣಿನ ಪೆಟ್ಟಿಗೆಯಲ್ಲಿ ಇಡುವ ಸಂಪ್ರದಾಯವೂ ಇತ್ತು. ಕುಡತಿನಿ ಬಳಿ ಸಿಕ್ಕಿರುವ ಶವ ಪೆಟ್ಟಿಗೆ ಭಿನ್ನ ಆಕಾರ ಹೊಂದಿದೆ. ಭಟ್ಟಿಯಲ್ಲಿ ಸುಟ್ಟು ತಯಾರಿಸಲಾಗುತ್ತಿದ್ದ ಮಣ್ಣಿನ ಶವಪೆಟ್ಟಿಗೆ ಮೇಲೆ ಚಿತ್ರಗಳನ್ನು ಅಂಟಿಸಲಾಗಿದೆ. ಚೂರುಗಳಾಗಿದ್ದ ಶವಪೆಟ್ಟಿಗೆಯನ್ನು ಇದೀಗ ಜೋಡಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos