ಆರ್.ಮಾನಸಯ್ಯರ ಸರ್ವಾಧಿಕಾರಿ ಧೋರಣೆ; ಕಾರ್ಯಕರ್ತರಿಂದ ಸಿಪಿಐ(ಎಂಎಲ್) ರೆಡ್ ಸ್ಟಾರ್ ಗೆ ಸಾಮೂಹಿಕ ರಾಜಿನಾಮೆ

ಆರ್.ಮಾನಸಯ್ಯರ ಸರ್ವಾಧಿಕಾರಿ ಧೋರಣೆ; ಕಾರ್ಯಕರ್ತರಿಂದ ಸಿಪಿಐ(ಎಂಎಲ್) ರೆಡ್ ಸ್ಟಾರ್ ಗೆ ಸಾಮೂಹಿಕ ರಾಜಿನಾಮೆ

ಸಿಂಧನೂರು(ರಾಯಚೂರು), ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಸಿಪಿಐ (ಎಂಎಲ್) ರೆಡ್‍ಸ್ಟಾರ್ ಪಕ್ಷಕ್ಕೆ ರಾಯಚೂರು, ಕೊಪ್ಪಳ ಜಿಲ್ಲಾ ಘಟಕ ಹಾಗೂ ಸಿಂಧನೂರು ತಾಲ್ಲೂಕು ಘಟಕದ ಅನೇಕ ಕಾರ್ಯಕರ್ತರು ಇತ್ತೀಚೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ, ಪತ್ರವನ್ನು ಜಿಲ್ಲಾ ಕಾರ್ಯದರ್ಶಿಗಳ ಮೂಲಕ ರಾಜ್ಯ ಘಟಕದ ಕಾರ್ಯದರ್ಶಿ ಬಿ.ರುದ್ರಯ್ಯ ಅವರಿಗೆ ರವಾನಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ಮುಖಮಡರು ಹಾಗೂ ಕಾರ್ಯಕರ್ತರು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಕಾರ್ಯಕರ್ತರಾದ ತಾವು ‘ಕಳೆದ 20-30 ವರ್ಷಗಳಿಂದ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಆದರೆ ಕಳೆದ ಹಲವಾರು ವರ್ಷಗಳಿಂದ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಆದ್ಯತೆ ಸಿಗುತ್ತಿಲ್ಲ. ಇದಕ್ಕೆ ವಿರುದ್ಧವಾಗಿ ಪಕ್ಷದ ತತ್ವ, ಸಿದ್ಧಾಂತವನ್ನು ಗಾಳಿಗೆ ತೂರಿ, ನಾಯಕರ ಹಿಂಬಾಲಕರಾಗಿ ಕೆಲಸ ಮಾಡುವವರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಮುಖ್ಯವಾಗಿ ರಾಜ್ಯ ಘಟಕದ ಸದಸ್ಯ ಆರ್.ಮಾನಸಯ್ಯ ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷದ ಸಂಘಟನೆ ಬೆಳವಣಿಗೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಸಂವಿಧಾನ ಮತ್ತು ಕಾರ್ಯಕ್ರಮ ಉಲ್ಲಂಘಿಸಿ ಕೆಲಸ ಮಾಡುವ ಚಟುವಟಿಕೆಗಳು ತೀವ್ರಗೊಂಡಿವೆ. ಪಕ್ಷದ ಒಳಗಡೆ ಪ್ರಜಾತಾಂತ್ರಿಕ ಪದ್ಧತಿಯ ನಿಯಮಗಳನ್ನು ಧಿಕ್ಕರಿಸಲಾಗುತ್ತಿದೆ. ವ್ಯಕ್ತಿ ಆಧರಿತ ಚಟುವಟಿಕೆಗಳಿಗೆ ಪ್ರಮುಖ ಆದ್ಯತೆ ಕೊಡಲಾಗುತ್ತಿದೆ. ಪಕ್ಷಕ್ಕೆ ಬದ್ಧರಾದವರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂಬ ಆಘಾತಕಾರಿ ವಿಷಯಗಳನ್ನು ಹೊರ ಹಾಕಿದ್ದಾರೆ.

ಪಕ್ಷದ ಒಳಗಿನ ಸಂಘಟನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪಕ್ಷದ ಪಥಕ್ಕೆ ಪೂರಕವಾಗಿ ಕೆಲಸ ಮಾಡಲು ಒತ್ತಾಯಿಸಿ, ಹಿರಿಯ ಸಂಗಾತಿಗಳಾದ ಡಿ.ಎಚ್.ಪೂಜಾರ್‌, ಕೆ.ಬಿ.ಗೋನಾಳ ಸಮಗ್ರವಾದ ಲಿಖಿತ ವರದಿಯನ್ನು ಮುಂದಿಟ್ಟುಕೊಂಡು ಕಳೆದ 5 ವರ್ಷಗಳಿಂದ ವಿಮರ್ಶಾತ್ಮಕವಾದ ಚರ್ಚೆ ನಡೆಸಿ ಹೋರಾಡಿಸಿದ್ದಾರೆ. ಪಕ್ಷದ ಒಳಗೆ ತಪ್ಪಾದ ಆಚರಣೆ ಮತ್ತು ಸರ್ವಾಧಿಕಾರಿ ಧೋರಣೆ ವಿರುದ್ಧದ ಅವರ ರಾಜೀರಹಿತವಾದ ಹೋರಾಟಕ್ಕೆ ಯಾವುದೇ ಪರಿಹಾರ ದೊರಕಿಲ್ಲ. ಇದಲ್ಲದೆ ಈಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಪಕ್ಷದ 8ನೇ ರಾಜ್ಯ ಸಮ್ಮೇಳನದಲ್ಲಿ ಸಂಪೂರ್ಣ ವರದಿ ಮತ್ತು ಇತರೆ ದಾಖಲಾತಿಯೊಂದಿಗೆ ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಈ ಬೆಳವಣಿಗೆಗಳಿಂದ ಬೇಸತ್ತು ನಾವು ಸಾಮೂಹಿಕ ರಾಜಿನಾಮೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಈ ಎಲ್ಲಾ  ಬೆಳವಣಿಗೆಯಿಂದ ಬೇಸತ್ತು ಜಿಲ್ಲಾ ಘಟಕದ ಸದಸ್ಯ ನಾಗರಾಜ್ ಪೂಜಾರ್, ತಾಲ್ಲೂಕು ಘಟಕದ ಸದಸ್ಯರಾದ ಬಿ.ಎನ್.ಯರದಿಹಾಳ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಹಟ್ಟಿ, ಮರಿಯಮ್ಮ, ಗೌಸಖಾನ್, ಶೀನಪ್ಪ ನಾಯಕ ಮತ್ತು ಗಾಲಿಮಪ್ಪ, ಕೊಪ್ಪಳ ಜಿಲ್ಲಾ ಘಟಕದ ಸದಸ್ಯರಾದ ಬಸವರಾಜ ಹಗೇದಾಳ, ಎಂ.ಯೇಶಪ್ಪ, ಮಲ್ಲೇಶಗೌಡ ಕೆ, ಬಸವರಾಜ ನರೇಗಲ್, ದ್ಯಾವಮ್ಮ ತಾವರಗೇರಾ, ಬಾಳನಗೌಡ ಕನ್ನಾಳ ಮತ್ತಿತರರು ಸಾಮೂಹಿಕವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos