ಸಂತೆ ಮಾರ್ಕೆಟಾಯ್ತು ಕಾಲೇಜು ಮೈದಾನ

ಸಂತೆ ಮಾರ್ಕೆಟಾಯ್ತು ಕಾಲೇಜು ಮೈದಾನ

ಬೆಂಗಳೂರು, ಮಾ. 28: ಬೆಂಗಳೂರಿನಲ್ಲಿ ಹೊರಗಡೆ ಗುಂಪಾಗಿ ಓಡಾಡಲು, ಒಂದೇ ಕಡೆ ಹೆಚ್ಚು ಜನರು ಸೇರಲು ನಿರ್ಬಂಧ ಹೇರಿದ್ದರೂ ಜನಸಂದಣಿಯೇನೂ ಕಡಿಮೆಯಾಗಿಲ್ಲ. ಅದರಲ್ಲೂ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು-ಹೂವು ಕೊಳ್ಳಲು ಜನರು ಗುಂಪು-ಗುಂಪಾಗಿ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆಯ ಸ್ವಲ್ಪ ಭಾಗದ ಅಂಗಡಿಗಳನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಶಿಫ್ಟ್ ಮಾಡಲಾಗಿದೆ. ಆದರೆ, ಬಿಬಿಎಂಪಿಯ ತುರ್ತು ನಿರ್ಧಾರದಿಂದ ಕಾಲೇಜು ಮೈದಾನ ಈಗ ಮತ್ತೊಂದು ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ.

ತರಕಾರಿ, ಹಣ್ಣುಗಳನ್ನು ಕೊಳ್ಳಲು ಕೆ.ಆರ್. ಮಾರುಕಟ್ಟೆಗೆ ಜನರು ಮುಗಿಬೀಳುತ್ತಿದ್ದಾರೆ. ತರಕಾರಿ ಕೊಳ್ಳಲು ಚಂದ್ರಾ ಲೇಔಟ್, ವಿಜಯನಗರ, ಬಸವನಗುಡಿ ಕಡೆಯಿಂದ ಜನರು ಕೆ.ಆರ್. ಮಾರ್ಕೆಟ್‌ಗೆ ಆಗಮಿಸುತ್ತಿದ್ದಾರೆ. ಹೀಗಾಗಿ, ಸಚಿವ ಆರ್. ಅಶೋಕ್ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಮಾರ್ಕೆಟ್ ವ್ಯಾಪಾರವನ್ನು ಬೇರೆಡೆಗೆ ಶಿಫ್ಟ್ ಮಾಡಿ, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು.

ಕೆ.ಆರ್. ಮಾರ್ಕೆಟ್‌ನಲ್ಲಿರುವ ಅಂಗಡಿಗಳನ್ನು ಬಸವನಗುಡಿಯ ನ್ಯಾಷನಲ್ ಮೈದಾನ ಮತ್ತು ವಿಜಯನಗರದ ಮೈದಾನಕ್ಕೆ ಶಿಫ್ಟ್ ಮಾಡಲಾಗುವುದು. ಅಲ್ಲಿ ತರಕಾರಿ ಮಾರಾಟಕ್ಕೆ ಅನುವು ಮಾಡಿ, ಅಂತರ ಕಾಯ್ದುಕೊಳ್ಳಲು ಸೂಚನೆ ಕೊಡಲಾಗುತ್ತದೆ ಎಂದು ಹೇಳಿದ್ದರು. ಅದರಂತೆ, ಇಂದು ಕೆ.ಆರ್. ಮಾರುಕಟ್ಟೆಯ ಕೆಲವು ಅಂಗಡಿಗಳನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ.

ಬೇಕಾಬಿಟ್ಟಿ ಅಂಗಡಿಗಳು

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದ ತುಂಬ ತರಕಾರಿ ತುಂಬಿದ ಲಾರಿಗಳು ನಿಂತಿವೆ. ಮಾರ್ಕೆಟ್‌ನಲ್ಲಿ ಜನಸಂದಣಿಯಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಮೈದಾನಕ್ಕೆ ಅಂಗಡಿಗಳನ್ನು ಶಿಫ್ಟ್ ಮಾಡಿದರೆ ಇಲ್ಲೂ ಕೂಡ ಎಲ್ಲಿ ಬೇಕೆಂದರಲ್ಲಿ ತರಕಾರಿಗಳನ್ನು ಹಾಕಿಕೊಂಡು ನೂಕು-ನುಗ್ಗಲು ಮಾಡಲಾಗಿದೆ. ಬಿಬಿಎಂಪಿ ಹಾಕಿರುವ ಶೆಲ್ಟರ್‌ನತ್ತ ತಲೆ ಹಾಕದ ವ್ಯಾಪಾರಿಗಳು ತಮಗೆ ಬೇಕೆಂದಲ್ಲಿ ತರಕಾರಿಗಳ ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೂ ಮೈದಾನದಲ್ಲಿ ವ್ಯವಸ್ಥೆ ಮಾಡಿಲ್ಲ.

ಮೈದಾನದಲ್ಲಿ ವ್ಯಾಪಾರಿಗಳ ಬೇಜವಾಬ್ದಾರಿಯುತ ನಡವಳಿಕೆ ಬಗ್ಗೆ ತಿಳಿದು ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮಿಸಿದ್ದಾರೆ. ಅಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಶಿಫ್ಟ್ ಅವೈಜ್ಞಾನಿಕ

ಲಾಕ್‌ಡೌನ್‌ಗೆ ಕರೆ ನೀಡಿರುವುದರಿಂದ ಜನರಿಗೆ ತರಕಾರಿ ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಬಿಬಿಎಂಪಿ ಹೋಲ್‌ಸೇಲ್ ತರಕಾರಿ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಇದರ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳದ ವ್ಯಾಪಾರಿಗಳು ಗುಂಪು ಸೇರಿಸಿಕೊಂಡು, ಗಲಾಟೆಯೆಬ್ಬಿಸಿದ್ದಾರೆ. ತುರ್ತಾಗಿ ಕೆ.ಆರ್. ಮಾರ್ಕೆಟ್‌ನ ಅಂಗಡಿಗಳನ್ನು ಅವೈಜ್ಞಾನಿಕವಾಗಿ ಮೈದಾನಕ್ಕೆ ಶಿಫ್ಟ್ ಮಾಡುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.

ಉಲ್ಟಾ ಆಯ್ತು ಅಧಿಕಾರಿಗಳ ಲೆಕ್ಕಾಚಾರ

ಮಾರ್ಕೆಟ್‌ನಲ್ಲಿ ಜನದಟ್ಟಣೆ ಕಡಿಮೆ ಮಾಡಲು ಹೋಗಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಾತ್ರೆ ಮಾಡಿದಂತಾಗಿದೆ. ಮೈದಾನದಲ್ಲಿ ತರಕಾರಿ ಕೊಳ್ಳಲು ಅವಕಾಶ ಕೊಟ್ಟರೆ ಜನರು ಸಾಲಾಗಿ ಬಂದು ಖರೀದಿ ಮಾಡುವ ಮೂಲಕ ಜನಸಂದಣಿ ಕಡಿಮೆಯಾಗುತ್ತದೆ ಎಂಬ ಬಿಬಿಎಂಪಿ ಅಧಿಕಾರಿಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಮೈದಾನದಲ್ಲಿ 30 ಅಡಿ ಅಂತರದಲ್ಲಿ ವ್ಯಾಪಾರಿಗಳಿಗೆಂದು ಸ್ಟಾಲ್ ಹಾಕಿಕೊಳ್ಳಬೇಕು ಎನ್ನಲಾಗಿತ್ತು. ಆದರೆ, ಈಗ ಮಾರಾಟಗಾರರು ಮತ್ತು ಖರೀದಿಗಾರರ ನಡುವೆ ಯಾವುದೇ ಅಂತರವಿಲ್ಲ. ನ್ಯಾಷನಲ್ ಕಾಲೇಜು ಮೈದಾನವೀಗ ಮತ್ತೊಂದು ಸಂತೆ ಮಾರ್ಕೆಟ್ ರೀತಿ ಕಂಡುಬರುತ್ತಿದೆ.!

ಫ್ರೆಶ್ ನ್ಯೂಸ್

Latest Posts

Featured Videos